ಬಿಜೆಪಿ ಶಾಸಕರ ಸಭೆಗೆ ಕಾಂಗ್ರೆಸ್​​ ಕಾರ್ಯಕರ್ತರ ಮುತ್ತಿಗೆ

bjp-mlas-meeting
bjp-mlas-meeting
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸಿಗರ ನಡೆಗೆ ಸುರೇಶ್‌ಕುಮಾರ್ ತೀವ್ರ ಆಕ್ಷೇಪ
ಬೆಂಗಳೂರು: ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್ ಅವರು ನಡೆಸುತ್ತಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಮುತ್ತಿಗೆ ಹಾಕಲು ಯತ್ನಿಸಿ ಘೋಷಣೆಗಳನ್ನು ಕೂಗಿರುವುದು ಎರಡೂ ಪಕ್ಷಗಳು ಆರೋಪ, ಪ್ರತ್ಯಾರೋಪಕ್ಕೆ ವೇದಿಕೆ ಕಲ್ಪಿಸಿದೆ.
ಇತ್ತೀಚಿಗೆ ಯುವ ಕಾಂಗ್ರೆಸ್ ಮುಖಂಡರೊಬ್ಬರು ಶಾಸಕ ಸುರೇಶ್‌ಕುಮಾರ್ ಪ್ರತಿನಿಧಿಸುವ ರಾಜಾಜಿನಗರ ಮತಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳಲ್ಲಿ 300 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸುರೇಶ್‌ಕುಮಾರ್ ಅವರು ಆರ್‌ಟಿಒ ಕಚೇರಿಯಲ್ಲಿ ನಡೆಸುತ್ತಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಹೈಡ್ರಾಮವೇ ನಡೆದುಹೋಯಿತು. ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದ ಕಾಂಗ್ರೆಸ್ ಕಾರ್ಯಕರ್ತರು, ಸುರೇಶ್‌ಕುಮಾರ್‌ಗೆ ಸಭೆ ನಡೆಸಲು ನೈತಿಕ ಹಕ್ಕಿಲ್ಲವೆಂದು ಪ್ರತಿಭಟನೆ ನಡೆಸಿದರು.
ಒಂದು ಹಂತದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತ ತಲುಪಿತು. ಮಧ್ಯಪ್ರವೇಶಿಸಿದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ದೂರು ಕಳುಹಿಸಿ ಸಭೆ ನಡೆಯಲು ಅವಕಾಶ ಮಾಡಿಕೊಟ್ಟರು. ಇದರ ಹೊರತಾಗಿಯೂ ಕಾಂಗ್ರೆಸ್ ಮುಖಂಡರು ಘೋಷಣೆಗಳನ್ನು ಕೂಗೂತ್ತಲೇ ಇದ್ದರು. ನಂತರ ಸಭೆ ಜಾಗದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಶಾಸಕರ ಅಸಮಾಧಾನ:

ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸುರೇಶ್‌ಕುಮಾರ್, ಕ್ಷೇತ್ರದ ಪ್ರತಿನಿಧಿಯಾಗಿ ನಾನು ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅನುಚಿತವಾಗಿ ವರ್ತಿಸಿ ಪ್ರತಿಭಟನೆ ನಡೆಸಿರುವುದು ಸರಿಯಲ್ಲ. ಅಭಿವೃದ್ಧಿ ಕಾರ್ಯಗಳಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ ನಾನು ಸಭೆ ನಡೆಸುವಾಗ ಇಲ್ಲಸಲ್ಲದ ನೆಪ ಮಾಡಿ ಪ್ರತಿಭಟನೆ ಮಾಡಿದ್ದು ಸರಿಯಲ್ಲ. ಇದು ಜನರಿಗೆ ಮಾಡಿದ ಅಪಮಾನ ಎಂದಿದ್ದಾರೆ.

ಪೊಲೀಸ್ ಆಯುಕ್ತರ ಶಾಸಕರ ಪತ್ರ:

ಜನಸ್ಪಂದನಾ ಸಭೆ ನಡೆಯುವ ವೇಳೆ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಕಾರ್ಯಕರ್ತರ ನಡವಳಿಗೆ ವಿರುದ್ಧ ಶಾಸಕರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸಲು ಅವಕಾಶ ಇಲ್ಲ. ಹೋರಾಟಕ್ಕೆ ಅವಕಾಶ ಇದ್ದರೂ, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಬಳಿಕ ಅಲ್ಲಿಯೆ ಪ್ರಕ್ರಿಯೆ ಮುಂದುವರಿಸಬೇಕಿತ್ತು. ಆದರೆ, ನಾನು ಸಭೆ ನಡೆಸುವ ಜಾಗಕ್ಕೆ ಬಂದು ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿದ್ದು ಹೇಗೆ? ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಕಾನೂನು ಉಲ್ಲಂಸಿ ಜನಪ್ರತಿನಿಧಿ ನಡೆಸುತ್ತಿದ್ದ ‘ಜನರೊಂದಿಗೆ ಜನಸೇವಕ’ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿರುವ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಂತೆ ಸುರೇಶ್‌ಕುಮಾರ್ ಪೊಲೀಸ್ ಆಯುಕ್ತರನ್ನು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net