ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಕಾಂಗ್ರೆಸ್​ ಪಾಳಯದಲ್ಲಿ ಬಿಗ್ ಸ್ಕೆಚ್? ಹೊಸ ಬಾಂಬ್​ ಸಿಡಿಸಿದ ಎಚ್‌ಡಿಕೆ! HD Kumaraswamy

HD Kumaraswamy
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್​ ಡಿ ಕುಮಾರಸ್ವಾಮಿ
Published on: 

ಬೆಂಗಳೂರು: ರಾಜ್ಯ ರಾಜಕಾರಣದ ಅಂಗಳದಲ್ಲಿ ಸದ್ಯ ಎದ್ದಿರುವ ಸ್ಟಿಂಗ್​ ಆಪರೇಷನ್​ ಅನ್ನೋ ಬಿರುಗಾಳಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ( HD Kumaraswamy ) ಹೊಸದೊಂದು ಸ್ಫೋಟಕ ತಿರುವು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಿ ತಮ್ಮದೇ ಆದ ಆಡಳಿತ ಸಾಮ್ರಾಜ್ಯವನ್ನು ಸ್ಥಾಪಿಸಲು ಕಾಂಗ್ರೆಸ್ ಪಕ್ಷದ ಆಂತರಿಕ ನಾಯಕರೇ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್​.ಡಿ.ಕುಮಾರಸ್ವಾಮಿ ಅವರು ರಾಜ್ಯವನ್ನು ತಲ್ಲಣಗೊಳಿಸಿರುವ ಸ್ಟಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ ಎನ್ನಲಾದ ಗೌಪ್ಯ ವರದಿಯ ವಿಚಾರವನ್ನು ಪ್ರಸ್ತಾಪಿಸಿದರು. ತನಿಖಾ ಸಂಸ್ಥೆಗಳ ದ್ವಿಮುಖ ನೀತಿಯನ್ನು ಕಟುವಾಗಿ ಟೀಕಿಸಿದ ಎಚ್​ಡಿಕೆ, ಅಸಲಿ ದುಷ್ಕೃತ್ಯ ಎಸಗಿದ ಗೂಂಡಾಗಳನ್ನು ಹಾಗೂ ಪ್ರಕರಣವನ್ನು ಚಿತ್ರೀಕರಿಸಿದ ಸೂತ್ರಧಾರರನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುವುದನ್ನು ಬಿಟ್ಟು, ಸಾರ್ವಜನಿಕ ಗಮನವನ್ನು ಬೇರೆಡೆಗೆ ಸೆಳೆಯಲು ಮಣ್ಣೆರಚುವ ಕೆಲಸ ನಡೆಯುತ್ತಿದೆ. ವಿಷಯಾಂತರ ಮಾಡುವ ಮೂಲಕ ನಿಜವಾದ ಅಪರಾಧಿಗಳನ್ನು ರಕ್ಷಿಸಿ ತನಿಖೆಯ ದಿಕ್ಕನ್ನೇ ಸಂಪೂರ್ಣವಾಗಿ ಬದಲಾಯಿಸಲಾಗುತ್ತಿದೆ ಎಂಬ ತಮ್ಮ ಹಳೆಯ ಆರೋಪವನ್ನೇ ಅವರು ಪುನರುಚ್ಚರಿಸಿದ್ದಾರೆ.

Also Read
ಸ್ಟಿಂಗ್​ ಆಪರೇಷನ್​ ಪ್ರಕರಣದಲ್ಲಿ ನಿರಪರಾಧಿಗಳನ್ನು ಸಿಕ್ಕಿ ಹಾಕಿಸುವ ಪ್ರಯತ್ನ: ಕೆ.ಎನ್​. ರಾಜಣ್ಣ ಸ್ಫೋಟಕ ಹೇಳಿಕೆ! Sting Operation
HD Kumaraswamy

ಸ್ಟಿಂಗ್ ಸೂತ್ರಧಾರರನ್ನು ಬಂಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಬಳಿ ಆಗ್ರಹಿಸಿದ್ದರೆ ಎಂಬ ಸುದ್ದಿ ಇದೆ. ನಾವು ಕೂಡ ಹೇಳ್ತಾ ಇರೋದು ಅದನ್ನೇ. ತನಿಖೆಯ ದಾರಿ ಏನು ತಪ್ಪಿಸುತ್ತಾ ಇದ್ದೀರಿ ಅದನ್ನು ಸರಿಪಡಿಸಿಕೊಳ್ಳಿ ಅಂತ ಹೇಳ್ತಾ ಇದ್ದೀನಿ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನು ಸಿದ್ದರಾಮಯ್ಯ ಅವರ ಸದ್ಧಾಂತಿಕ ಹಾಗೂ ರಾಜಕೀಯ ವೈರಿಯಾಗಿ ಸುದೀರ್ಘ ಕಾಲದಿಂದ ಹೋರಾಡುತ್ತಾ ಬಂದಿದ್ದೇನೆ. ತಮ್ಮದೇ ಹಿಂದುಳಿದ ಸಮುದಾಯದ ನಾಯಕರೊಬ್ಬರು (ಡಿ.ಕೆ. ಶಿವಕುಮಾರ್​) ಉನ್ನತ ಅಧಿಕಾರದಲ್ಲಿದ್ದಾರೆಂಬ ಅಸೂಯೆಯಿಂದಾಗಲೀ ಅಥವಾ ಸಿದ್ದರಾಮಯ್ಯ ಅವರ ಮೇಲಿನ ಅನುಕಂಪದಿಂದಾಗಲೀ ಈ ಮಾತುಗಳನ್ನು ಹೇಳುತ್ತಿಲ್ಲ. ಬದಲಾಗಿ ರಾಜ್ಯಕ್ಕೆ ಬಂದೊದಗಿರುವ ಈ ಕೆಟ್ಟ ಸಂಸ್ಕೃತಿ ಮತ್ತು ನಾಡಿನ ಭವಿಷ್ಯ ಕುಸಿಯುತ್ತಿರುವ ಭೀತಿಗೆ ಪ್ರತಿಯೊಬ್ಬ ನಾಗರಿಕನಿಗೂ ನಿಜಸ್ಥಿತಿಯ ದರ್ಶನ ಮಾಡಿಸುವುದು ತಮ್ಮ ಕರ್ತವ್ಯ ಎಂದರು.

ಕಾಂಗ್ರೆಸ್ ಅಂಗಳದಲ್ಲಿ ನಡೆಯುತ್ತಿರುವ ಈ ಕುತಂತ್ರದ ರಾಜಕಾರಣದ ಹಿಂದೆ ಬೃಹತ್ ಲೆಕ್ಕಾಚಾರ ಅಡಗಿದೆ ಎಂದು ದೂರಿದ ಕುಮಾರಸ್ವಾಮಿ, ತಮ್ಮದೇ ಪಕ್ಷದ ಅತ್ಯಂತ ಪ್ರಭಾವಿ ನಾಯಕನನ್ನು ಹಂತ ಹಂತವಾಗಿ ಮೂಲೆಗುಂಪು ಮಾಡಿ, ತಮ್ಮದೇ ಸ್ವಯಂ-ನಿರ್ಮಿತ ಹೊಸ ರಾಜಕೀಯ ಸೌಧವನ್ನು ಕಟ್ಟಲು ಕೆಲ ಕೈ ನಾಯಕರು ಹಗಲಿರುಳು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ವೈಯಕ್ತಿಕ ವರ್ಚಸ್ಸಿಗೆ ಭಂಗ ತಂದು ಅವರ ಅಧ್ಯಾಯ ಮುಗಿಸಲು ಹೆಣೆದಿರುವ ಈ ಬಲೆ, ಕೊನೆಗೆ ಕಾಂಗ್ರೆಸ್ ಪಕ್ಷಕ್ಕೇ ತಿರುಗೇಟು ನೀಡಲಿದೆ ಎಂದು ಎಚ್ಚರಿಸಿದ್ದಾರೆ.

Also Read
ಡಿಕೆಶಿ ಏನೇ ನಾಟಕ ಮಾಡಿದ್ರೂ ಎಂಎಲ್‍ಸಿ ಚುನಾವಣೆ ಗೆಲ್ಲಲು ಆಗ್ಲಿಲ್ಲ! ಜನರೇ ಪಾಠ ಕಲಿಸಲಿದ್ದಾರೆ: ಬಿ.ವೈ. ವಿಜಯೇಂದ್ರ
HD Kumaraswamy

ಅಧಿಕಾರದ ಮದದಲ್ಲಿ ಕುಳಿತಿರುವ ಕೈ ನಾಯಕರ ಈ ಎಲ್ಲಾ ಒಳಸಂಚುಗಳು ಮತ್ತು ದುಷ್ಟ ರಾಜಕೀಯ ಕೃತ್ಯಗಳಿಗೆ ರಾಜ್ಯದ ಪ್ರಬುದ್ಧ ಜನತೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಮುಂಬರುವ 2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರು ತಮ್ಮ ಮತದ ಮೂಲಕ ಈ ರಾಜಕೀಯ ದುರಾಸೆಗೆ ಶಾಶ್ವತ ಚೌಕಟ್ಟು ಹಾಕಿ, ಧೂಳೀಪಟ ಮಾಡಲಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.