ಡಿಕೆಶಿ ಏನೇ ನಾಟಕ ಮಾಡಿದ್ರೂ ಎಂಎಲ್‍ಸಿ ಚುನಾವಣೆ ಗೆಲ್ಲಲು ಆಗ್ಲಿಲ್ಲ! ಜನರೇ ಪಾಠ ಕಲಿಸಲಿದ್ದಾರೆ: ಬಿ.ವೈ. ವಿಜಯೇಂದ್ರ

BY Vijayendra
ಡಿಕೆಶಿ ಏನೇ ನಾಟಕ ಮಾಡಿದ್ರೂ ಎಂಎಲ್‍ಸಿ ಚುನಾವಣೆ ಗೆಲ್ಲಲು ಆಗ್ಲಿಲ್ಲ! ಜನರೇ ಪಾಠ ಕಲಿಸಲಿದ್ದಾರೆ: ಬಿ.ವೈ. ವಿಜಯೇಂದ್ರ
Published on: 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಜೀ ಅವರ ಜನಪ್ರಿಯತೆಯನ್ನು ಸಹಿಸಲಾಗದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡರು ದೇಶದಲ್ಲಿನ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ ಹಾಲಿನ ದರ ಏರಿಕೆ ಮಾಡಿ ಕಾಂಗ್ರೆಸ್ ಸರ್ಕಾರ ಜನರ ಬದುಕಿಗೆ ಬರೆ ಎಳೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿಜೀ ಅವರ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಅನ್ಯಾಯದ ಮಾರ್ಗದಿಂದ ಎಂಬಂತೆ ಇವರು ಬಿಂಬಿಸುತ್ತಿದ್ದಾರೆ. ಆದರೆ, ದೇಶದ ಜನರೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಿದ್ದಾರೆ. ಇದನ್ನು ತಿಳಿಯದ ಅವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಈ ಪ್ರಜಾಪ್ರಭುತ್ವ ವಿರೋಧಿ ನಡೆ ವಿರುದ್ಧ ‘ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿʼ ಜಾಗೃತಿ ಅಭಿಯಾನವನ್ನು ದೇಶದಾದ್ಯಂತ ಆರಂಭಿಸಿದ್ದೇವೆ ಎಂದರು.

ಕರ್ನಾಟಕದಲ್ಲಿ ಕೋಲಾರದಲ್ಲಿ ಚಾಲನೆ ನೀಡಲಾಗುತ್ತಿದೆ. ಈ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಲಾಗುವುದು. ಪಕ್ಷದ ರಾಷ್ಡ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕರಾದ ಆರ್.ಅಶೋಕ್, ಚಲವಾದಿ ನಾರಾಯಣಸ್ವಾಮಿ ಪ್ರಮುಖ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಆಕ್ರೋಶದಿಂದ ಮಾತನಾಡಿದ್ದೇನೆ ಹೌದು!

ಕಳೆದ ವಾರ ದಾವಣಗೆರೆಯಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶದಿಂದ ಮಾತನಾಡಿದ್ದೇನೆ. ನನ್ನ ಪದ ಬಳಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ. ಯಾರನ್ನೂ ಉದ್ದೇಶಪೂರ್ವಕವಾಗಿ ನೋಯಿಸುವ ಆಲೋಚನೆ ಇರಲಿಲ್ಲ. ಕಾಂಗ್ರೆಸ್ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಕೆಪಿಎಸ್‍ಸಿಯಲ್ಲಿ ಸುಧಾರಣೆ ಮಾಡದ ಈ ಕಾಂಗ್ರೆಸ್ ಸರ್ಕಾರ, ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಎರಡೂವರೆ ಲಕ್ಷ ಖಾಲಿ ಹುದ್ದೆಯನ್ನು ಭರ್ತಿ ಮಾಡಲಿಲ್ಲ. ಪರೀಕ್ಷೆ ಬರೆದು ಅಭ್ಯರ್ಥಿಗಳು ವರ್ಷಗಟ್ಟಲೆ ಕಾಯಬೇಕಾಗಿದೆ. ಅವರು ನೋವಿನಿಂದ ಬೀದಿಗಿಳಿಯುವ ಸ್ಥಿತಿ ಎದುರಾಗಿದೆ. ಮೀಸಲಾತಿ ವಿಚಾರದಲ್ಲೂ ಸರಿಯಾಗಿ ವಾದ ಮಂಡನೆ ಮಾಡಲಿಲ್ಲ ಎಂದು ದೂರಿದರು.

ಜನರ ಬದುಕಿಗೆ ಬರೆ ಎಳೆದ ಸರ್ಕಾರ

ಹಾಲಿನ ದರ ಏರಿಸಿರುವ ಈ ಸರ್ಕಾರ, ರಾಜ್ಯದ ಜನರಿಗೆ ಸರಿಯಾದ ಉಡುಗೊರೆ ನೀಡಿದೆ. ರೈತರಿಗೆ ನೆರವು ನೀಡಲು ಹಾಲಿನ ದರ ಏರಿಕೆ ಮಾಡಿ ಜನರಿಗೆ ಹೊರೆ ಮಾಡುವ ಬದಲು ಸರ್ಕಾರವೇ ಅದನ್ನು ಭರಿಸಬೇಕಿತ್ತು. ಈ ಸರ್ಕಾರಕ್ಕೆ ಮಾನ ಮರ್ಯಾದೆಯೇ ಇಲ್ಲ. ಜನಸಾಮಾನ್ಯರು ನೆಮ್ಮದಿಯಿಂದ ಬದುಕುವ ರೀತಿ ಇಲ್ಲ. ಇದನ್ನು ಖಂಡಿಸಿ ಜನರೇ ದಂಗೆ ಏಳುವ ಸ್ಥಿತಿ ನಿರ್ಮಾಣವಾಗಿದೆ. ಹಬ್ಬದ ವೇಳೆಯೇ ಏರಿಕೆ ಮಾಡಿರುವುದು ಅಕ್ಷಮ್ಯ ಅಪರಾಧ. ಇದನ್ನು ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಾಗುವುದು. ಜನರ ಪರವಾಗಿ ಪಕ್ಷವೇ ಬೀದಿಗಿಳಿಯಲಿದೆ ಎಂದರು.

ಜನರೇ ಪಾಠ ಕಲಿಸುತ್ತಾರೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಏನೇ ನಾಟಕ ಮಾಡಿದರೂ ಎಂಎಲ್‍ಸಿ ಚುನಾವಣೆ ಗೆಲ್ಲಲು ಆಗಲಿಲ್ಲ. ಇದರಿಂದ ಅವರು ಹತಾಶರಾಗಿದ್ದಾರೆ. ಜನರ ಭಾವನೆ ಕಾಂಗ್ರೆಸ್ ಸರ್ಕಾರದ ವಿರುದ್ಧವಿದೆ ಎಂಬುದನ್ನು ಅವರು ತಿಳಿಯಬೇಕು. ಚುನಾವಣೆಗೂ ಮೊದಲು ನೂರಾರು ಭರವಸೆ ನೀಡಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಂಚನೆಯಾಗಿದೆ. ಹಿರಿಯೂರು ಉಪ ಚುನಾವಣೆಯಲ್ಲೂ ಕಾಂಗ್ರೆಸ್‍ಗೆ ಜನರು ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಕುಮಾರಸ್ವಾಮಿ ಟಾರ್ಗೆಟ್

ಸ್ಟಿಂಗ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ. ಕುಮಾರಸ್ವಾಮಿ ಅವರೇ ಹಲವು ವಿಚಾರಗಳನ್ನು ಹೇಳಿದ್ದಾರೆ. ನಿಜವಾದ ಅಪರಾಧಿಗಳು ಯಾರು ಎಂಬ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಸ್ಟಿಂಗ್ ಆಪರೇಷನ್ ಮೂಲಕ ಕಾಂಗ್ರೆಸ್ ಸರ್ಕಾರ ತನ್ನ ಬುಡಕ್ಕೆ ಬೆಂಕಿ ಇಟ್ಟುಕೊಳ್ಳುತ್ತಿದೆ. ಸ್ಟಿಂಗ್ ಮುಖ್ಯಮಂತ್ರಿ ಬುಡಕ್ಕೆ ಬಂದು ಬೀಳಲಿದೆ. ಸಿಎಂ ಬದಲಾವಣೆಗೆ ಅವರ ಪಕ್ಷದಲ್ಲೇ ಒತ್ತಡ ಆರಂಭವಾಗಿದೆ ಎಂದು ಹೇಳಿದರು.

2028ರಲ್ಲಿ ಬಿಜೆಪಿ ಸರ್ಕಾರ

2028ರಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ರಚಿಸುವ ಸಂಕಲ್ಪ ಮತ್ತು ಗುರಿಯೊಂದಿಗೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ್ ದ್ವಿವೇದಿ ತಿಳಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಳೆದ ಸುಮಾರು ಮೂರೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಿಂದ ಹಿಡಿದು ಸಾಮಾನ್ಯ ಜನರ ಸಮಸ್ಯೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕಾಂಗ್ರೆಸ್ ನಾಯಕರು, ಶಾಸಕರು, ಸಂಸದರು ಹಾಗೂ ಸಚಿವರು ಹೇಗೆ ಲೂಟಿ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗ ಹಾಲಿನ ದರದಲ್ಲಿ ಭಾರಿ ಪ್ರಮಾಣದ ಏರಿಕೆ ಮಾಡಲಾಗಿದೆ. ಸುಮಾರು ಎಂಟು ರೂಪಾಯಿ ಹೆಚ್ಚಿಸಿದ್ದಾರೆ. ಮೊಸರಿನ ದರವನ್ನೂ ಏರಿಸಿದ್ದಾರೆ ಎಂದು ಆಕ್ಷೇಪಿಸಿದರು.

Also Read
ಶುಕ್ರವಾರವೇ ಸಿನಿಮಾಗಳು ರಿಲೀಸ್​ ಆಗುವುದೇಕೆ? ಚಿತ್ರೋದ್ಯಮದ ಈ ಲಾಜಿಕ್​ ಹಿಂದಿದೆ ಸಖತ್​ ಇಂಟ್ರೆಸ್ಟಿಂಗ್​ ಸ್ಟೋರಿ | Friday Release
BY Vijayendra

ಕಾಂಗ್ರೆಸ್‍ಗೆ ಸಾಮಾನ್ಯ ಜನರ ಹಿತಾಸಕ್ತಿಯನ್ನು ಪರಿಗಣಿಸುತ್ತಿಲ್ಲ. ಕಾಂಗ್ರೆಸ್ ಪಕ್ಷವು ಕೇವಲ ತನ್ನ ನಾಯಕರ ಅಭಿವೃದ್ಧಿ ಹಾಗೂ ಗಾಂಧಿ ಪರಿವಾರದ ಹಿತರಕ್ಷಣೆಯ ಚಿಂತೆಯಲ್ಲೇ ಮುಳುಗಿದೆ. ನಾವು ಮುಂಬರುವ ದಿನಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಎಲ್ಲಾ ವಿಷಯಗಳನ್ನು ಮುಂಚೂಣಿಗೆ ತಂದು ಜನರ ಬಳಿಗೆ ಹೋಗಲಿದ್ದೇವೆ. ಬಿಜೆಪಿ, ರಾಜ್ಯ ಉಸ್ತುವಾರಿಯನ್ನಾಗಿ ಪಕ್ಷವು ನನ್ನನ್ನು ನೇಮಿಸಿದೆ ಎಂದರು.

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಾಗ ಆತ್ಮಾವಲೋಕನ ಮಾಡಿಕೊಳ್ಳುವ ಬದಲು, ಚುನಾವಣಾ ಆಯೋಗ, ಇವಿಎಂ ಹಾಗೂ ಸುಪ್ರೀಂ ಕೋರ್ಟ್ ಅನ್ನು ದೂಷಿಸುತ್ತದೆ. ಕಾಂಗ್ರೆಸ್ ಎಂದಿಗೂ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸುವುದಿಲ್ಲ. ಗಾಂಧಿ ಪರಿವಾರವೇ ಸರ್ವಸ್ವ ಎಂದು ಭಾವಿಸುತ್ತಾರೆ. ಆದರೆ, ದೇಶದ ಪ್ರಜ್ಞಾವಂತ ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಕರ್ನಾಟಕದ ನಾಲ್ಕೂ ಎಂಎಲ್‍ಸಿ ಸ್ಥಾನಗಳಲ್ಲಿ ಪ್ರಜ್ಞಾವಂತ ಮತದಾರರು, ಶಿಕ್ಷಕರು ಮತ್ತು ಪದವೀಧರರು ಬಿಜೆಪಿ-ಎನ್‍ಡಿಎ ಅಭ್ಯರ್ಥಿಗಳನ್ನು ಭರ್ಜರಿ ಅಂತರದಿಂದ ಗೆಲ್ಲಿಸುವ ಮೂಲಕ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.