ಹೆಬ್ಬಾಳ, ನಾಗವಾರ ಕೆರೆ ಸಮಗ್ರ ಅಭಿವೃದ್ಧಿ

lake development
lake development
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಹಂತದ ಕಾಮಗಾರಿ ಜುಲೈಗೆ ಮುಕ್ತಾಯ
  • 2ನೇ ಹಂತಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ
ಬೆಂಗಳೂರು: ಬೆಂಗಳೂರು ಉತ್ತರ ಭಾಗದ ದೊಡ್ಡ ಜಲ ತಾಣಗಳಾದ ಹೆಬ್ಬಾಳ ಕೆರೆ ಹಾಗೂ ನಾಗವಾರ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಜುಲೈ ಅಂತ್ಯದೊಳಗೆ ಮೊದಲ ಹಂತದ ಕೆಲಸ ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ.
ಹೊರ ವರ್ತುಲ ರಸ್ತೆಗೆ (ಒಆರ್‌ಆರ್) ಹೊಂದಿಕೊಂಡಿರುವ ಈ ಎರಡೂ ಕೆರೆಗಳು ಹೆಬ್ಬಾಳ ಕಣಿವೆ ವ್ಯಾಪ್ತಿಗೆ ಸೇರುತ್ತವೆ. ವರ್ಷಪೂರ್ತಿ ಜಲ ಸಂಗ್ರಹ ಇರುತ್ತಿದ್ದ ಕಾರಣದಿಂದ ಸುತ್ತಲಿನ ಪ್ರದೇ ಹಸಿರು ಹೆಚ್ಚಳಕ್ಕೆ ಕಾರಣವಾಗಿತ್ತು. ಜತೆಗೆ ಅಂತರ್ಜಲ ವೃದ್ಧಿಗೆ ನೆರವಾಗುತ್ತಿದೆ. ಆದರೆ, ಈ ಎರಡೂ ಕೆರೆಗಳು ಅರಣ್ಯ ಇಲಾಖೆ ಸುಪರ್ದಿಯಲ್ಲಿದ್ದ ಕಾರಣ ಪಾಲಿಕೆ ವತಿಯಿಂದ ಹೊಸದಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರ ಹೆಬ್ಬಾಳ ಕೆರೆ ಹಾಗೂ ನಾಗವಾರ ಕೆರೆಯನ್ನು ಅರಣ್ಯ ಇಲಾಖೆಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ವರ್ಗಾಯಿಸಿ ಆದೇಶದ ಬಳಿಕ ಪುನಶ್ಚೇತನ ಕೆಲಸಗಳನ್ನು ಜಾರಿಗೊಳಿಸಲಾಗುತ್ತಿದೆ.

32 ಕೋಟಿ ರೂ. ವೆಚ್ಚ:

ಹೆಬ್ಬಾಳ ಕೆರೆ ಹಾಗೂ ನಾಗವಾರ ಕೆರೆಯ ಸಮಗ್ರ ಅಭಿವೃದ್ಧಿಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ (ಎನ್‌ಡಿಎಂಎ್) ಬಳಸಿಕೊಳ್ಳಲಾಗುತ್ತಿದೆ. ಮೊದಲ ಹಂತದ ಸಿವಿಲ್ ಕಾಮಗಾರಿಗಳಿಗೆ ತಲಾ 16 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಹೂಳೆತ್ತುವಿಕೆ, ಕೆರೆಯ ಏರಿ ಎತ್ತರಿಸಿ ಭದ್ರಪಡಿಸುವುದು, ಒಳ/ಹೊರ ಹರಿವಿನ ತೂಬುಗಳ ಪುನಶ್ಚೇತನ, ಕೆರೆ ಸುತ್ತ ತಂತಿ ಬೇಲಿ ಅಳವಡಿಕೆ, ವೆಟ್ ಲ್ಯಾಂಡ್ ಅಭಿವೃದ್ಧಿ ಸೇರಿವೆ. ನಾಗವಾರ ಕೆರೆ ಹಾಗೂ ಹೆಬ್ಬಾಳ ಕೆರೆಯಲ್ಲಿ ಕ್ರಮವಾಗಿ ಶೇ.80 ಮತ್ತು ಶೇ.50 ಕೆಲಸ ಪೂರ್ಣಗೊಂಡಿದ್ದು, ಜೂನ್ ತಿಂಗಳಾಂತ್ಯದೊಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಜಿಬಿಎ ಅಧಿಕಾರಿಗಳು ಗುರಿ ಹಾಕಿಕೊಂಡಿದ್ದಾರೆ.

ಶೀಘ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ:

ಎರಡನೇ ಹಂತದಲ್ಲಿ ಎರಡೂ ಕೆರೆಗಳಲ್ಲಿ ನಡಿಗೆ ಪಥ, ಸಸಿ ನೆಡುವಿಕೆ, ಸಾರ್ವಜನಿಕರಿಗೆ ಮೂಲಸೌಕರ್ಯ ಹಾಗೂ ಸೌಂದರ್ಯಿಕರಣ ಕೆಲಸಗಳನ್ನು ಕೈಗೆತ್ತಿಕೊಳ್ಳಲು ನೀಲಿನಕ್ಷೆ ರೂಪಿಸಲಾಗಿದೆ. ಕೆರೆ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಅನುದಾನ ಬಳಸಿಕೊಳ್ಳುತ್ತಿರುವ ಕಾರಣ 2ನೇ ಹಂತದ ಕಾಮಗಾರಿಗೂ ನೆರವು ಕೋರಲು ಜಿಬಿಎ ನಿರ್ಧರಿಸಿದೆ. ಇದಕ್ಕೆ ಮುಖ್ಯ ಆಯುಕ್ತರು ಒಪ್ಪಿಗೆ ನೀಡಿದ್ದ್ದು, ಈ ವಾರವೇ ಸರ್ಕಾರಕ್ಕೆ ಪತ್ರ ಬರೆದು ನೆರವಿನ ಪ್ರಸ್ತಾವನೆ ಸಲ್ಲಿಸುವಂತೆ ಯೋಜನೆ ಅನುಷ್ಠಾನ ಘಟಕದ (ಪಿಐಯು) ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನರ್ಸರಿ ಹಸ್ತಾಂತಕ್ಕೆ ಶಾಸಕರ ಮಧ್ಯಸ್ಥಿಕೆ:

ಹೆಬ್ಬಾಳ ಕೆರೆಯ ದಕ್ಷಿಣ ಭಾಗದಲ್ಲಿ ಅರಣ್ಯ ಇಲಾಖೆಯು 14 ಎಕರೆ ಜಾಗದಲ್ಲಿ ನರ್ಸರಿಯನ್ನು ಅಭಿವೃದ್ಧಿಪಡಿಸಿ ಸಸಿಗಳನ್ನು ವಿತರಿಸುತ್ತಿದೆ. ಕೆರೆಯನ್ನು ಪಾಲಿಕೆ ಸುಪರ್ದಿಗೆ ವಹಿಸಿದ್ದರೂ, ನರ್ಸರಿ ಜಾಗವನ್ನು ಬಿಟ್ಟುಕೊಡಲು ಅರಣ್ಯ ಇಲಾಖೆ ಹಿಂದೇಟು ಹಾಕುತ್ತಿದೆ. ಈ ವಿಚಾರವಾಗಿ ಸ್ಥಳೀಯ ಶಾಸಕ ಕೃಷ್ಣಬೈರೇಗೌಡ ಮಧ್ಯಸ್ಥಿಕೆ ನಡೆಸಿ ಕೆರೆಯ ಭಾಗವಾಗಿರುವ ನರ್ಸರಿ ಜಾಗವನ್ನು ತಕ್ಷಣವೇ ಪಾಲಿಕೆಗೆ ಹಸ್ತಾಂತರಿಸಲು ತಾಕೀತು ಮಾಡಿದ್ದಾರೆ.

ಕಲ್ಯಾಣಿ ನಿರ್ಮಿಸಲು ಸ್ಥಳೀಯರ ಆಗ್ರಹ:

ನಾಗವಾರ ಕೆರೆ ಇದುವರೆಗೂ ಅರಣ್ಯ ಇಲಾಖೆ ಸುಪರ್ದಿಯಲ್ಲಿದ್ದ ಕಾರಣ ಗಣಪತಿ ವಿಗ್ರಹಗಳ ವಿಸರ್ಜನೆಗೆ ಕಲ್ಯಾಣಿ ನಿರ್ಮಿಸಲು ಅವಕಾಶ ನೀಡಿರಲಿಲ್ಲ. ಸದ್ಯ ಜಿಬಿಎ ಕೆರೆ ಪುನಶ್ಚೇತನ ಕೈಗೊಂಡಿರುವ ಹಿನ್ನೆಲೆ ಕಲ್ಯಾಣಿಯನ್ನು ನಿರ್ಮಿಸಿ ಈ ಭಾಗದಲ್ಲಿ ಗಣೇಶೋತ್ಸವ ಹಾಗೂ ದುರ್ಗಾದೇವಿ ಉತ್ಸವಗಳಂದು ವಿಗ್ರಹಗಳನ್ನು ವಿಸರ್ಜನೆಗೆ ಸೌಲಭ್ಯ ಒದಗಿಸಬೇಕು. ಇದೇ ರೀತಿ ಹೆಬ್ಬಾಳ ಕೆರೆ ಬದಿಯಿರುವ ಕಲ್ಯಾಣಿಯನ್ನು ಮರುನಿರ್ಮಿಸಬೇಕು ಎಂದು ಸ್ಥಳೀಯರು ಜಿಬಿಎಗೆ ಮನವಿ ಮಾಡಿದೆ.
ಹೆಬ್ಬಾಳ ಕೆರೆ ಮತ್ತು ನಾಗವಾರ ಕೆರೆಗಳನ್ನು ಅಭಿವೃದ್ಧಿಸುತ್ತಿರುವ ಸರ್ಕಾರ ಅವುಗಳನ್ನು ಹಿಂದಿನಂತೆ ಮನರಂಜನಾ ತಾಣವಾಗಿ ಗುರುತಿಸದೆ ಪರಿಸರ ಸಂರಕ್ಷಣೆಗೆ ಮೀಸಲಿಡಬೇಕು. ಹೆಬ್ಬಾಳ ಕೆರೆಯಲ್ಲಿ ಕೃತಕ ದ್ವೀಪಗಳ ವಿಸ್ತೀರ್ಣವನ್ನು ಕಡಿತಗೊಳಿಸಿ ನೀರಿನ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೆಂಪೇಗೌಡರ ಕಾಲದಲ್ಲಿ ನಿರ್ಮಿಸಿರುವ ಕೆರೆ ಬಳಿಯಿರುವ ಐತಿಹಾಸಿಕ ಕುರುಹುಗಳನ್ನು ರಕ್ಷಿಸಲು ಅಧಿಕಾರಿಗಳು ಗಮನ ಹರಿಸಲಿ.
- ಮಂಜುನಾಥ್, ಹೆಬ್ಬಾಳ ನಿವಾಸಿ
ಬೆಂಗಳೂರು ಉತ್ತರ ಭಾಗದ ಕೆರೆಗಳಿಗೆ ಹೊಸ ರೂಪ ನೀಡಲು ರಾಜ್ಯ ಸರ್ಕಾರದ ನೆರವಿನಲ್ಲಿ ಜಿಬಿಎ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತ ಶೀಘ್ರ ಪೂರ್ಣಗೊಳ್ಳಲಿದ್ದು, 2ನೇ ಹಂತದ ಕೆಲಸಗಳಿಗೆ ನೆರವು ಕೋರಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಎರಡೂ ಕೆರೆಗಳಲ್ಲಿ ಮೀನು ಸಾಕಣೆಗೆ ಅವಕಾಶ ಕಲ್ಪಿಸುವ ಚಿಂತನೆ ಇದೆ.
- ನಿತ್ಯ, ಕಾರ್ಯನಿರ್ವಾಹಕ ಇಂಜಿನಿಯರ್, ಪಿಐಯು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net