ಅಧಿಸೂಚಿತ ವಾರ್ಡ್ ಗಡಿಗಳ ಪಾಲನೆ ಕಡ್ಡಾಯ

ward boundaries meet
ward boundaries meet
Published on

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆಗಳ ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತರ ಸೂಚನೆ
  • ಪ್ರತಿ ಕಾರ್ಪೋರೇಷನ್‌ನಲ್ಲಿ ಚುನಾವಣಾ ವಿಭಾಗ ರಚನೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 5 ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿ ಅಧಿಸೂಚನೆಯಲ್ಲಿ ನಮೂದಿಸಿರುವ ವಾರ್ಡ್ ಗಡಿಗಳ ಪಾಲನೆ ಕಡ್ಡಾಯ ಎಂದು ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಬಿಎ ಮುಖ್ಯ ಕಚೇರಿಯಲ್ಲಿ ಸೋಮವಾರ 5 ಪಾಲಿಕೆಗಳ ಕರಡು ಮತದಾರರ ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ಕುರಿತು ಆಯೋಜಿಸಲಾದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಧಿಸೂಚನಾ ವಾರ್ಡ್ ವಿವರಣೆಗಳಿಗೆ ಅನುಗುಣವಾಗಿ ಮ್ಯಾಪ್ ಗಡಿಗಳನ್ನು ಸರಿಪಡಿಸಿ ನವೀಕರಿಸುವ ಸಲುವಾಗಿ, ದೀರ್ಘಾವಧಿಯಲ್ಲಿ ವ್ಯವಸ್ಥಿತ ಸರ್ವೇ ಮೂಲಕ ಪರಿಶೀಲನೆ ಕೈಗೊಳ್ಳುವಂತೆ ಐಟಿ ವಿಭಾಗದ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಚುನಾವಣಾ ವಿಭಾಗ ರಚನೆ:

ಪ್ರತಿ ಪಾಲಿಕೆಯಲ್ಲಿ ತಲಾ ಒಬ್ಬ ತಹಸೀಲ್ದಾರ್, ವ್ಯವಸ್ಥಾಪಕ, ಎಫ್​ಡಿ, ಎಸ್‌ಡಿಎ ಹಾಗೂ ಡೇಟಾ ಎಂಟ್ರಿ ಆಪರೇಟರ್ ಹೊಂದಿರುವ ಚುನಾವಣಾ ವಿಭಾಗವನ್ನು ರಚಿಸುವಂತೆ ಮುಖ್ಯ ಆಯುಕ್ತರು ನಿರ್ದೇಶಿಸಿದರು.

ವಿಭಜಿತ ವಾರ್ಡ್‌ಗಳ ಪರಿಶೀಲನೆ/ದೃಡೀಕರಣ:

ಕರಡು ಪಾಲಿಕೆ ಮತದಾರರ ಪಟ್ಟಿ ಮಾಹಿತಿಯ ಆಧಾರದ ಮೇಲೆ ಎಲ್ಲ ವಾರ್ಡ್‌ಗಳನ್ನು ವಿಶೇಷವಾಗಿ ವಿಭಜಿತ ವಾರ್ಡ್‌ಗಳನ್ನು ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಜತೆಗೆ, ವಿಭಜಿತ ವಾರ್ಡ್‌ಗಳಿಗೆ ಸಂಬಂಧಿಸಿದ ಮಾಹಿತಿಯ ನಿಖರತೆಯನ್ನು ಪಾಲಿಕೆ ಆಯುಕ್ತರು ಸ್ವತಂತ್ರವಾಗಿ ಪರಿಶೀಲಿಸಿ ದೃಡೀಕರಿಸುವಂತೆ ಮಹೇಶ್ವರ್ ರಾವ್ ನಿರ್ದೇಶಿಸಿದ್ದಾರೆ.
ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರಾದ ರಾಜೇಂದ್ರ ಚೋಳನ್, ಪಿ.ಸುನೀಲ್ ಕುಮಾರ್, ಡಿ.ಎಸ್. ರಮೇಶ್, ಕೆ.ಎನ್. ರಮೇಶ್, ಕಂದಾಯ ವಿಭಾಗದ ಅಪರ ಆಯುಕ್ತ ಮಂಜುನಾಥ ಸ್ವಾಮಿ, ಪ್ರಜ್ಞಾ ಅಮ್ಮೆಂಬಳ, ಸಹಾಯಕ ಆಯುಕ್ತ ಎಂ.ಶ್ರೀನಿವಾಸ್ ಹಾಗೂ ಇತರರು ಉಪಸ್ಥಿತರಿದ್ದರು.


ನೋಡಲ್ ಅಧಿಕಾರಿ ನಿಯೋಜನೆ:

ಮತಗಟ್ಟೆಗಳ ಒಟ್ಟು ಸಂಖ್ಯೆ, ಪಾಲಿಕೆಗಳ ಒಳಗೆ ವಿಭಜಿತವಾದ ವಾರ್ಡ್‌ಗಳು ಹಾಗೂ ಪಾಲಿಕೆಗಳ ನಡುವೆ ವಿಭಜಿತವಾದ ವಾರ್ಡ್‌ಗಳಿಗೆ ಸಂಬಂಧಿಸಿದ ಡೇಟಾ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಹಾಗೂ ಜಿಬಿಎ ಚುನಾವಣಾ ವಿಭಾಗದೊಂದಿಗೆ ಸಮನ್ವಯ ಸಾಧಿಸುವ ಉದ್ದೇಶದಿಂದ 5 ಪಾಲಿಕೆಗಳಲ್ಲಿಯೂ ಕಂದಾಯ ವಿಭಾಗದ ಅಪರ ಆಯುಕ್ತರನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲು ಮುಖ್ಯ ಆಯುಕ್ತರು ನಿರ್ದೇಶಿಸಿದರು.
"

ಕರಡು ಪಾಲಿಕೆ ಮತದಾರರ ಪಟ್ಟಿಯ ಪರಿಶೀಲನೆಯ ವೇಳೆ ನಿಖರತೆ, ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಏಕರೂಪವಾದ ಪ್ರಮಾಣಿತ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯ. ಜತೆಗೆ ಎಲ್ಲ ವಾರ್ಡ್‌ಗಳಲ್ಲಿ ಕಡ್ಡಾಯವಾಗಿ ಸಂಪೂರ್ಣವಾಗಿ ಪರಿಶೀಲನೆ ನಡೆಸಬೇಕು.

- ರಾಮಚಂದ್ರನ್ ಆರ್, ಚುನಾವಣೆ ವಿಭಾಗದ ವಿಶೇಷ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net