ವಿವಿಧೆಡೆ ಅಂಡರ್‌ಪಾಸ್. ಸೇತುವೆಗಳ ಸುಂದರಗೊಳಿಸುವ ವಿಶೇಷ ಕಾರ್ಯಕ್ರಮ
ಬೆಂಗಳೂರು: ಬ್ಲಾಕ್ ಸ್ಪಾಟ್‌ಗಳ ನಿರ್ಮೂಲನೆ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ರಸ್ತೆಗೆ ಸಂಪರ್ಕ ಕಲ್ಪಿಸುವ ನ್ಯಾಯಾಂಗ ಬಡಾವಣೆಯ ರೈಲ್ವೆ ಅಂಡರ್‌ಪಾಸ್ ಸೇರಿ ಆ ಪ್ರದೇಶದ ಸುತ್ತಮುತ್ತ ಉತ್ತರ ಪಾಲಿಕೆ ಸಿಬ್ಬಂದಿ ಹಾಗೂ ಟೆಕ್ಕಿಗಳು ಸ್ವಚ್ಛತಾ ಕಾರ್ಯ ಕೈಗೊಂಡು ಕೆಳಸೇತುವೆಗೆ ಹೊಸ ರೂಪ ನೀಡಲಾಗಿದೆ.
ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನದ ಅಂಗವಾಗಿ ಗುರುವಾರ ನಡೆದ ಸ್ವಚ್ಛತಾ ಕಾರ್ಯದ ಜತೆಗೆ ರೈಲ್ವೆ ಅಂಡರ್‌ಪಾಸ್‌ನ ಗೋಡೆಗಳಿಗೆ ಬಣ್ಣ ಬಳಿದು ಆಕರ್ಷಕವಾಗಿ ಕಣುವಂತೆ ಸೌಂದರ್ಯಿಕರಣ ಕೈಗೊಳ್ಳಲಾಯಿತು. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಹಾಗೂ ಉತ್ತರ ಪಾಲಿಕೆಯ ಆಯುಕ್ತ ಪಿ. ಸುನೀಲ್ ಕುಮಾರ್ ಸ್ವತಃ ಕಸ ಹೆಕ್ಕಿದ ಬಳಿಕ ಗೋಡೆಗಳಿಗೆ ಸುಣ್ಣ-ಬಣ್ಣ ಬಳಿದು ಸೌಂದರ್ಯೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಆಯುಕ್ತರು, ನಗರವನ್ನು ಸುಂದರ ಮತ್ತು ಸ್ವಚ್ಚವಾಗಿರಿಸುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕಿದೆ. ನ್ಯಾಯಾಂಗ ಬಡಾವಣೆ ಪ್ರದೇಶದಲ್ಲಿ ರೈಲ್ವೆ ಹಳಿ ಇರುವ ಕಾರಣ ಸಾರ್ವಜನಿಕರು ಅನಧಿಕೃತವಾಗಿ ಹಳಿಯನ್ನು ದಾಟುವುದು ಗಮನಕ್ಕೆ ಬಂದಿದೆ. ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಲು ಅಂಡರ್‌ಪಾಸ್ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು ಎಂದರು.
ವಿಶೇಷ ಕಾರ್ಯಕ್ರಮಕ್ಕೆ ಚಿಂತನೆ:
ಅಂಡರ್‌ಪಾಸ್ ಹಾಗೂ ಸೇತುವೆಗಳ ಕೆಳಭಾಗದಲ್ಲಿ ಕಸ ಹಾಕುವುದು, ಪೋಸ್ಟರ್ ಅಂಟಿಸುವುದು ಹಾಗೂ ಅಶುಚಿಗೊಳಿಸುವುದನ್ನು ತಡೆಯಲು ನಗರದ ಎಲ್ಲ ಅಂಡರ್‌ಪಾಸ್‌ಗಳು ಮತ್ತು ಸೇತುವೆಗಳನ್ನು ಸುಂದರಗೊಳಿಸುವ ವಿಶೇಷ ಕಾರ್ಯಕ್ರಮವನ್ನು ಪಾಲಿಕೆ ಆರಂಭಿಸಿದೆ ಎಂದು ಅವರು ವಿವರಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಉತ್ತರ ಪಾಲಿಕೆಯ ಕಾರ್ಯಪಾಲಕ ಅಭಿಯಂತರ ಸುಧಾಕರ್ ರೆಡ್ಡಿ, ಎಜಿಎಂ ಪಾವನಾ, ತೀರ್ಥಪ್ರಸಾದ್, ಅರುಣ್ ಪೈ, ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಖಾಸಗಿ ಸಂಸ್ಥೆಯ 150ಕ್ಕೂ ಹೆಚ್ಚು ಸ್ವಯಂಸೇವಕರು ಹಾಜರಿದ್ದರು.