ಬೌರಿಂಗ್ ಸಂಸ್ಥೆಯಲ್ಲಿ 2021-22ರಿಂದ ಈವರೆಗೆ 2,000 ಹೊಸ ಸದಸ್ಯರನ್ನು ತಲಾ 20 ಲಕ್ಷ ರೂ. ಶುಲ್ಕ ಪಡೆದು ಸದಸ್ಯತ್ವ ನೀಡಲಾಗಿದೆ. ಶುಲ್ಕಕ್ಕೆ ಶೇ.18 ಜಿಎಸ್‌ಟಿಯಂತೆ ತಲಾ 3.6 ಲಕ್ಷ ರೂ.ನಂತೆ ಒಟ್ಟು 54 ಕೋಟಿ ರೂ. ಸ್ವೀಕರಿಸಿದ್ದರೂ, ಈವರೆಗೂ ಆ ಹಣವನ್ನು ಸಂಬಂಧಿಸಿದ ಇಲಾಖೆಗೆ ಪಾವತಿಸಿಲ್ಲ. ಈ ವಂಚನೆಯನ್ನು ಆರ್ಥಿಕ ಅಪರಾಧ ಎಂದು ಪರಿಗಣಿಸಿ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಇದೇ ವಿಚಾರವಾಗಿ ಹಿಂದೆಯೇ ಪ್ರಧಾನಮಂತ್ರಿ ಕಚೇರಿಗೂ ದೂರು ಸಲ್ಲಿಸಿದ್ದು, ಇದನ್ನಾಧರಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಪತ್ರ ರವಾನೆಯಾಗಿದೆ ಎಂದು ರಮೇಶ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.