ಪಾಲಿಕೆ ಸ್ವತ್ತು ಅಡವಿಟ್ಟು 754 ಕೋಟಿ ರೂ. ಸಾಲ !

mortgaging-municipal-assets
mortgaging-municipal-assets
Published on

ಪ್ರಮುಖ ಮುಖ್ಯಾಂಶಗಳು

  • ಎರಡು ದಶಕ ಕಳೆದರೂ ಈಜೀಪುರದ ಇಡಬ್ಲ್ಯುಎಸ್ ನಿವಾಸಿಗಳಿಗಿಲ್ಲ ಸೂರು
  • ವಸತಿ ಸಮುಚ್ಛಯ ನಿರ್ಮಿಸದ ಮೇವರಿಕ್ ಕಂಪನಿ ವಿರುದ್ಧ ಇ.ಡಿ.ಗೆ ದೂರು
ಬೆಂಗಳೂರು: ನಗರದ ಕೋರಮಂಗಲ ಬಳಿಯಿರುವ ಈಜೀಪುರದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ (ಇಡಬ್ಲ್ಯುಎಸ್) ಬಡಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಗುತ್ತಿಗೆ ಪಡೆದಿದ್ದ ಖಾಸಗಿ ಕಂಪನಿಯೊಂದು ಬಿಬಿಎಂಪಿಯಿಂದ ಮಂಜೂರಾಗಿದ್ದ 15.64 ಎಕರೆ ಜಾಗವನ್ನು ಅಡವಿಟ್ಟು 754 ಕೋಟಿ ರೂ. ಸಾಲ ಪಡೆದಿರುವ ಸಂಗತಿ ಈಗ ಬಹಿರಂಗಗೊಂಡಿದೆ.
ಎರಡು ದಶಕದ ಹಿಂದೆ ನ್ಯಾಷನಲ್ ಗೇಮ್ಸ್ ಕ್ರೀಡಾಂಗಣದ ಎದುರಿನ ವಿಶಾಲ ಜಾಗದಲ್ಲಿ ಇಡಬ್ಲ್ಯುಎಸ್ ಜನರು ವಾಸಿಸುತ್ತಿದ್ದ ವಸತಿಗೃಹಗಳಿದ್ದವು. ಇವು ಶಿಥಿಲಗೊಂಡು ಬೀಳುವ ಹಂತದಲ್ಲಿದ್ದ ಕಾರಣ ಕಟ್ಟಡಗಳನ್ನು ಕೆಡವಿ ಹೊಸದಾಗಿ ಅಪಾರ್ಟ್‌ಮೆಂಟ್ ನಿರ್ಮಿಸಿಕೊಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಕಟ್ಟಡ ಕೆಡವಿದ ಬಳಿಕ 2012ರಲ್ಲಿ ಹೊಸ ಕಟ್ಟಡ ನಿರ್ಮಾಣ ಹೊಣೆಯನ್ನು ಮೆ. ಮೇವರಿಕ್ ಕಂಪನಿಗೆ ವಹಿಸುವ ನಿರ್ಣಯವನ್ನು ಅಂದಿನ ಕೌನ್ಸಿಲ್ ಸಭೆಯಲ್ಲಿ ಕೈಗೊಳ್ಳಲಾಗಿತ್ತು.
ಒಟ್ಟು 1,640 ವಸತಿಗೃಹಗಳಿದ್ದ ಜಾಗದಲ್ಲೇ ಹೊಸದಾಗಿ ನಿರ್ಮಿಸಲು ವೆಚ್ಚ ಹೆಚ್ಚಳವಾಗುವುದೆಂದು ಅರಿತು 15.64 ಎಕರೆ ಪೈಕಿ 7.25 ಎಕರೆಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿ ಉಳಿದ ಜಾಗವನ್ನು (8.39 ಎಕರೆ) ಮೇವರಿಕ್ ಕಂಪನಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕಾಗಿ 2013ರಲ್ಲಿ ಸ್ವತ್ತನ್ನು ಬೊಮ್ಮನಹಳ್ಳಿ ಉಪನೋಂದಣಧಿಕಾರಿ ಕಚೇರಿಯಲ್ಲಿ ಕಂಪನಿಗೆ ಗುತ್ತಿಗೆ ಕರಾರು ಪತ್ರ ಮಾಡಿಕೊಡಲಾಯಿತು. 2014ರಲ್ಲಿ ತಿದ್ದುಪಡಿ ಕರಾರು ಪತ್ರವನ್ನು ಕಂಪನಿಗೆ ಹೆಸರಿಗೆ ನೋಂದಣಿ ಮಾಡಿಕೊಡಲಾಯಿತು. ಇದಾಗಿ ದಶಕವೇ ಕಳೆದಿದ್ದರೂ, ಒಬ್ಬ ಫಲಾನುಭವಿಗೂ ಸೂರು ನಿರ್ಮಿಸಿಕೊಟ್ಟಿಲ್ಲ. ಬದಲಾಗಿ ಮೇವರಿಕ್ ಕಂಪನಿ ಆ ಜಾಗವನ್ನು ಖಾಸಗಿ ಹಣಕಾಸು ಕಂಪನಿಯಲ್ಲಿ ಅಡವಿಟ್ಟು 754 ಕೋಟಿ ರೂ. ಹಣ ಪಡೆದುಕೊಂಡಿತು. ಈ ಸಾಲವನ್ನು ತೀರಿಸದೆ, ಇನ್ನೊಂದೆಡೆ ಬಡಜನರಿಗೆ ಸೂರು ನಿರ್ಮಿಸಿಕೊಡುವಲ್ಲಿ ಕಂಪನಿ ಎಡವಿದೆ ಎಂಬ ಆಕ್ಷೇಪ ಕೇಳಿಬಂದಿದೆ.

ಸಾಲ ನೀಡಿದ್ದ ಸಂಸ್ಥೆಯಿಂದ ಸ್ವತ್ತು ವಶಕ್ಕೆ ಯತ್ನ

ಪ್ರಸ್ತುತ ಸಾಲ ನೀಡಿರುವ ಹಣಕಾಸು ಸಂಸ್ಥೆ ಅಸಲು, ಬಡ್ಡಿ ಪಾವತಿಯಾಗದ ಕಾರಣ ತನಗೆ ಬರಬೇಕಿರುವ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಬದಲಾಗಿ ಅಡವಿಟ್ಟಿರುವ ಸ್ವತ್ತನ್ನೇ ತನ್ನ ವಶಕ್ಕೆ ನೀಡುವಂತೆ ಕಾನೂನು ಮೊರೆ ಹೋಗಿದೆ. ಹಾಗಾಗಿ ಕೋಟ್ಯಂತರ ರೂ. ಮೌಲ್ಯದ ಪಾಲಿಕೆ ಜಾಗ ಪರಭಾರೆಯಾಗುವ ಹಂತ ತಲುಪಿದೆ. ಇದಕ್ಕೆ ಕಾರಣವಾಗಿರುವ ಮೆ. ಮೇವರಿಕ್ ಕಂಪನಿಯ ಪ್ರಮುಖರು, ನಿರ್ದೇಶಕರು ಹಾಗೂ ಪಾಲಿಕೆ ಜಾಗವು ಸರ್ಕಾರದ ಕೈತಪ್ಪುವಂತೆ ನಿರ್ಧಾರ ಕೈಗೊಂಡಿರುವ ಬಿಬಿಎಂಪಿಯ ಹಿಂದಿನ ಆಯುಕ್ತರಾದ ಜಿ. ಕುಮಾರ್ ನಾಯಕ್ ಮತ್ತು ಮಂಜುನಾಥ್ ಪ್ರಸಾದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತರನ್ನು ಆಗ್ರಹಿಸಲಾಗಿದೆ. ಜತೆಗೆ ಪ್ರಕರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ - 2002 ಅಡಿಯಲ್ಲಿ ಹಾಗೂ ಭ್ರಷ್ಟಾಚಾರ, ವಂಚನೆ ಮತ್ತು ಅಧಿಕಾರ ದುರುಪಯೋಗ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಕೋರಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) 1,430 ಪುಟಗಳ ದಾಖಲೆ ಸಹಿತ ದೂರು ಸಲ್ಲಿಸಲಾಗಿದೆ ಎಂದು ಜಾಗೃತ ಮತದಾರರ ವೇದಿಕೆಯ ಕಾರ್ಯದರ್ಶಿ ಬಿ. ಗಣೇಶ್ ಸಿಂಗ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net