ಬೆಂಗಳೂರಿನಲ್ಲಿ 60 ಪ್ರದೇಶಗಳಲ್ಲಿ ಬಾಂಗ್ಲಾ ಜನರ ನೆಲೆ

banglapeople
banglapeople
Published on

ಪ್ರಮುಖ ಮುಖ್ಯಾಂಶಗಳು

  • ಮಲೆನಾಡಿನ ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿಗಳಾಗಿ ಬಳಕೆ
  • ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ಸಲ್ಲಿಸಿರುವ ಎನ್.ಆರ್. ರಮೇಶ್
ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನುಸುಳುಕೋರರು ಬೆಂಗಳೂರಿನ 60 ಕಡೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಜತೆಗೆ ಮಲೆನಾಡಿನ ಕಾಫಿ ಎಸ್ಟೇಟ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೂಲಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಲಕ್ಷಗಟ್ಟಲೆ ಸಂಖ್ಯೆಯಲ್ಲಿ ನೆರೆದೇಶದ ಪ್ರಜೆಗಳು ಕರ್ನಾಟಕದ ವಿವಿಧೆಡೆ ಬೀಡು ಬಿಟ್ಟಿರುವ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ದಾಖಲೆಗಳ ಸಹಿತ ಮಾಹಿತಿ ನೀಡಿರುವುದಾಗಿ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ತಿಳಿಸಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಕಾರ್ಯಕರ್ತ ಸುಧೀರ್ ಶೆಟ್ಟಿ ಅವರ ಸಹಕಾರದೊಂದಿಗೆ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಹತ್ತಾರು ಆಘಾತಕಾರಿ ವಿಷಯಗಳು ಬಯಲಾಗಿವೆ. ಬಾಂಗ್ಲಾದೇಶಿಯರನ್ನು ಕರೆತರುವುದು ಹೇಗೆ ? ಅವರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿಗಳನ್ನು ಮಾಡಿಸಿಕೊಡುವ ವಿಧಾನಗಳು ಯಾವುವು? ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಈ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿಯಾಗಿ ಬಳಕೆ:

ಬೆಂಗಳೂರು ನಗರದ 60ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬಾಂಗ್ಲಾ ವಾಸಿಗಳು ನೆಲೆಗೊಂಡಿದ್ದಾರೆ. ಅದರಲ್ಲೂ ಹೊರವಲಯದಲ್ಲಿ ಶೆಡ್‌ಗಳಲ್ಲಿ ವಾಸವಿದ್ದಾರೆ. ಜಿಗಣಿ ಸುತ್ತಮುತ್ತಲಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಜತೆಗೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳ ಕಾಫಿ ಎಸ್ಟೇಟ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೂಲಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ನಗರಗಳಲ್ಲೂ ಹಲವು ಲಕ್ಷ ಸಂಖ್ಯೆಯಲ್ಲಿ ಬಾಂಗ್ಲಾ ನುಸುಳುಕೋರರು ನೆಲೆಸಿದ್ದಾರೆ. ಜಿಗಣಿಯ ‘ಮೆಯ್ದಿ ಫೌಂಡೇಷನ್’ ಸ್ಥಾಪಿಸಿ ಸ್ಥಳೀಯ ಜನರ ಹೆಸರಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರು ಆಗಾಗ್ಗೆ ಬಾಂಗ್ಲಾಗೆ ವ್ಯಾಟ್ಸ್‌ಅಪ್ ಕರೆ ಹಾಗೂ ಅಂತಾರಾಷ್ಟ್ರೀಯ ಕರೆ ಮೂಲಕ ತಮ್ಮ ಬಂಧುಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ. ಇತ್ತೀಚಿಗಷ್ಟೇ ಜಿಗಣಿ ಪೊಲೀಸರು ಬಾಂಗ್ಲಾದೇಶಿಗರ ನೆಲೆ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ನುಸುಳುಕೋರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ.

ಎಲ್ಲೆಲ್ಲಿ ಬಾಂಗ್ಲನ್ನರ ನೆಲೆ?:

ಬೆಂಗಳೂರು ಹೊರವಲಯ, ಜಿಗಣಿ, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಶಿವಮೊಗ್ಗ ಮತ್ತು ಕೊಡಗು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ನಗರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net