ಬಿಎಸ್‌ಡಬ್ಲ್ಯುಎಂಎಲ್‌ನಿಂದ ನಿತ್ಯ 200 ಮೆ. ಟನ್ ಟ್ರ್ಯಾನ್ಸ್‌ಪೋರ್ಟ್
ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಸಂಗ್ರಹಿಸಲಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಆಂಧ್ರಪ್ರದೇಶದ ಕಡಪಗೆ ರವಾನಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲ್ಯುಎಂಎಲ್) ಮುಂದಾಗಿದೆ.
ಈ ಸಂಬಂಧ ಕಡಪದಲ್ಲಿರುವ ಖಾಸಗಿ ಕಂಪನಿಯ ಸಿಮೆಂಟ್ ಘಟಕದೊಂದಿಗೆ ನಿಗಮವು ಒಡಂಬಡಿಕೆ ಮಾಡಿಕೊಂಡಿದೆ. ನಿತ್ಯ ಗರಿಷ್ಠ 1,000 ಮೆಟ್ರಿಕ್ ಟನ್ ಪ್ರಮಾಣದಷ್ಟು ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ (ಆರ್‌ಡಿಎಫ್) ರವಾನಿಸಲಿದ್ದು, ಸೋಮವಾರ ಮೊದಲ ಬಾರಿಗೆ 160 ಮೆ. ಟನ್ ರವಾನಿಸಲಾಗಿದೆ.
500 ಮೆ. ಟನ್ ಆರ್‌ಡಿಎಫ್ ತ್ಯಾಜ್ಯ ಸಂಗ್ರಹ:
ನಗರದಲ್ಲಿ ನಿತ್ಯ ಒಟ್ಟು 6 ಸಾವಿರ ಮೆಟ್ರಿಕ್ ಟನ್ ಪ್ರಮಾಣದಷ್ಟು ಘನತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಈ ಪೈಕಿ 400-500 ಮೆಟ್ರಿಕ್ ಟನ್ ಆರ್‌ಡಿಎಫ್ ತ್ಯಾಜ್ಯವಾಗಿದೆ. ಇದರಲ್ಲಿ ಸುಮಾರು 100-150 ಮೆ. ಟನ್ ಬಿಡದಿ ಬಳಿ ಕಾರ್ಯಾಚರಿಸುತ್ತಿರುವ ತ್ಯಾಜ್ಯದಿಂದ ಇಂಧನ ಉತ್ಪಾದನೆ ಸ್ಥಾವರಕ್ಕೆ ಕಳುಹಿಸಲಾಗುತ್ತಿದೆ. ಈ ಘಟಕದಲ್ಲಿ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡಲು ಅವಕಾಶ ಇಲ್ಲದ ಕಾರಣ ಉಳಿದಿದ್ದನ್ನು ಆಂಧ್ರ ಕಂಪನಿಗೆ ರವಾನಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಒಡಂಬಡಿಕೆ ಅನ್ವಯ ಮೆ. ದಾಲ್ಮಿಯಾ ಸಿಮೆಂಟ್ ಲಿ. ಸಂಸ್ಥೆಯು ಸದರಿ ಪ್ರಕ್ರಿಯೆಯಲ್ಲಿನ ಇಪಿಆರ್ (ವಿಸ್ತರಿತ ಉತ್ಪಾದಕ ಹೊಣೆಗಾರಿಕೆ) ಕ್ರೆಡಿಟ್ಸ್‌ಗಳನ್ನು ನಿಗಮಕ್ಕೆ ನೀಡಲಿದ್ದು, ಇದರಿಂದ ಆರ್ಥಿಕವಾಗಿ ಲಾಭವಾಗಲಿದೆ ಎಂದು ನಿಮದ ಸಿಇಒ ಕರಿಗೌಡ ವಿವರಿಸಿದ್ದಾರೆ.
ವಿಂಗಡಿಸಿದ ಕಸ ನೀಡಲು ಮನವಿ:
ಮಹಾನಗರದ ಐದೂ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆ ಹೊಣೆಯನ್ನು ಬಿಎಸ್‌ಡಬ್ಲ್ಯುಎಂಎಲ್ ವಹಿಸಿದೆ. ಗೃಹ ಹಾಗೂ ಗೃಹೇತರ ಘಟಕಗಳಿಂದ ಹಸಿ ಹಾಗೂ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಈ ರೀತಿ ಒಣ ತ್ಯಾಜ್ಯವನ್ನು ನೀಡುವಾಗ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡುವಂತೆ ಹಾಗೂ ಅವುಗಳನ್ನು ಅದೇ ಸ್ವರೂಪದಲ್ಲಿ ಸಂಗ್ರಹಿಸುವಂತೆ ನಿಗಮವು ನಾಗರಿಕರಿಗೆ ಮನವಿ ಮಾಡಿದೆ.