ಮಾರ್ಷಲ್‌ಗಳಿಂದ ಹಣ ವಸೂಲಿ ದಂಧೆ ಆರೋಪ

marshals
marshals
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಸೈನಿಕರ ಬದಲು ಎನ್‌ಸಿಸಿ ತರಬೇತಾದವರ ನೇಮಕ
  • ಹೆಚ್ಚಿನ ಸಿಬ್ಬಂದಿ ನಿಯೋಜನೆಯಿಂದ ಪಾಲಿಕೆಗಳಿಗೆ ಹೊರೆ
  • ಕಳೆದ 8 ವರ್ಷದಲ್ಲಿ ವೇತನ-ಭತ್ಯೆಗೆ 180 ಕೋಟಿ ರೂ. ವೆಚ್ಚ
ಬೆಂಗಳೂರು: ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ನಿರ್ವಹಣೆಗೆಂದು ನಿಯೋಜನೆ ಆಗಿರುವ ಮಾರ್ಷಲ್‌ಗಳನ್ನು ಕ್ರಮೇಣ ವಿವಿಧ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೀಗ, ಈ ಮಾರ್ಷಲ್ ಸಿಬ್ಬಂದಿಯು ಅಂಗಡಿ/ಮಳಿಗೆಗಳು ಸೇರಿ ಹೋಟೆಲ್‌ಗಳಿಂದ ಮಾಸಿಕ ಇಂತಿಷ್ಟು ವಂತಿಗೆ ಹಣ ವಸೂಲು ಮಾಡುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.
ನಗರದಲ್ಲಿ ಕಸ ವಿಲೇವಾರಿ ವೇಳೆ ನಡೆಯುವ ಅನಿರೀಕ್ಷಿತ ಘಟನೆ, ಗಲಾಟೆ, ಗದ್ದಲ ನಿವಾರಣೆಗೆ ಹಾಗೂ ಭದ್ರತೆಗೆ ಮಾರ್ಷಲ್‌ಗಳನ್ನು ಬಳಸಲಾಗುತ್ತಿದೆ. ಇತ್ತೀಚಿಗೆ ಇವರನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ (ಬಿಎಸ್‌ಡಬ್ಲ್ಯುಎಂಎಲ್) ವ್ಯಾಪ್ತಿಗೆ ತಂದಿದ್ದು, ರಸ್ತಬದಿ ಕಸ ಎಸೆಯುವವರ ನಿಯಂತ್ರಣ, ದಿಢೀರ್ ಕಾರ್ಯಾಚರಣೆಗೂ ನಿಯೋಜಿಸಲಾಗಿದೆ. ಆರೋಗ್ಯ ಪರಿವೀಕ್ಷಕರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಬೇಕಿದ್ದರೂ, ಚೀಫ್​ ಮಾರ್ಷಲ್ ಹಾಗೂ ಮಾರ್ಷಲ್ ಸೂಪರ್‌ವೈಸರ್ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಇವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪಾಲಿಕೆಗಳಿಗೆ ಸಾಧ್ಯವಾಗುತ್ತಿಲ್ಲ.
ಹೆಚ್ಚಿನ ಮಾರ್ಷಲ್‌ಗಳಿಗೆ ತರಬೇತಿ ನೀಡದೆಯೆ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಭದ್ರತೆ ನೆಪದಲ್ಲಿ ಹಿರಿಯ ಅಧಿಕಾರಿಗಳ ಬೆಂಗಾವಲು ಸಿಬ್ಬಂದಿಯಾಗಿ ಕಾರ್ಯಾಚರಿಸುತ್ತಿದ್ದಾರೆ. ಪಾಳಿ ಮುಗಿದ ಬಳಿಕ ಅಂಗಿ, ಹೋಟೆಲ್ ಹಾಗೂ ಪ್ಲ್ಯಾಸ್ಟಿಕ್ ಗೋದಾಮು/ಮಾರಾಟ ಮಳಿಗೆಗಳಿಗೆ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ನೀಡದವರನ್ನು ಹೆದರಿಸಿ ನೋಟಿಸ್ ಕೊಡಿಸುವ ಧಮಕಿ ಹಾಕಿ ವಸೂಲಿ ದಂಧೆಗೆ ಇಳಿದಿದ್ದಾರೆಂದು ಕೆಲ ವ್ಯಾಪಾರಿಗಳು ಜಿಬಿಎ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿದ್ದಾರೆ. ಈ ಹಿಂದೆಯೂ ಜಿಬಿಎ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರಿಗೂ ದೂರು ದಾಖಲಿಸಿದ್ದರೂ, ಯಾರ ವಿರುದ್ಧವೂ ಕ್ರಮ ಕೈಗೊಳ್ಳದ ಕಾರಣ ಮಾರ್ಷಲ್‌ಗಳ ಉಪಟಳ ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ.

750ಕ್ಕೂ ಅಧಿಕ ಮಂದಿ ನಿಯೋಜನೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ನಿರ್ವಹಣೆಗೆಂದು 198 ವಾರ್ಡ್‌ಗಳಿಗೆ ತಲಾ ಒಬ್ಬರಂತೆ ಮಾರ್ಷಲ್‌ಗಳನ್ನು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬಂತೆ 27 ಸೂಪರ್‌ವೈಸರ್‌ಗಳನ್ನು ನಿಯೋಜಿಸಿಕೊಳ್ಳಲು 2017ರಲ್ಲಿ ಅಂದಿನ ಕೌನ್ಸಿಲ್ ಸಭೆಯ ಒಪ್ಪಿಗೆ ಪಡೆಯಲಾಯಿತು. ಜತೆಗೆ ಒಬ್ಬ ಚೀಫ್​ ಮಾರ್ಷಲ್ ನಿಯೋಜನೆಗೂ ಸರ್ಕಾರದಿಂದ ಅನುಮೋದನೆ ಪಡೆಯಲಾಯಿತು. ನಂತರದಲ್ಲಿ ಇಂದಿರಾ ಕ್ಯಾಂಟೀನ್ ಭದ್ರತೆಗೆ, ಕೆರೆಗೆಳ ರಕ್ಷಣೆ, ತ್ಯಾಜ್ಯ ಸಂಸ್ಕರಣಾ ಘಟಕಗಳ ಭದ್ರತೆ ಹೊಣೆಯನ್ನು ನೀಡಲಾಯಿತು. ಪ್ರತಿ ಮಾರ್ಷಲ್‌ಗೆ ಮಾಸಿಕ 25 ಸಾವಿರ ರೂ. ವೇತನವನ್ನು ಪಾಲಿಕೆ ನೀಡುತ್ತಿದ್ದರೂ, ವಾಸ್ತವದಲ್ಲಿ 17-18 ಸಾವಿರ ರೂ. ಮಾತ್ರ ಬಟವಾಡೆ ಮಾಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆಗೆ ವೇತನದ ಹಣ ಸಾಲದೆ ಮಾರ್ಷಲ್‌ಗಳು ಮಳಿಗೆಗಳಲ್ಲಿ ವಸೂಲಿ ದಂಧೆಗೆ ಇಳಿದಿದ್ದಾರೆ ಎನ್ನಲಾಗಿದೆ.
ನಿಯೋಜನೆಯಲ್ಲಿ ನಿಯಮ ಉಲ್ಲಂಘನೆ:
ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಿರುವಂತೆ ಮಾರ್ಷಲ್‌ಗಳ ನೇಮಕವನ್ನು ರಾಜ್ಯ ನಿವೃತ್ತ ಸೈನಿಕರ ಸಂಘದ ಮೂಲಕ ಭರ್ತಿ ಮಾಡಿಕೊಳ್ಳಬೇಕು ಎಂಬ ನಿಯಮ ರೂಪಿಸಲಾಗಿತ್ತು. ಆದರೆ, ಚೀಫ್​ ಮಾರ್ಷಲ್ ರಾಜವೀರ್ ಸಿಂಗ್ ನೇತೃತ್ವದ ‘ಸೈನಿಕ್ ವೆಲ್ಫೇರ್ ಅಸೋಸಿಯೇಷನ್’ ಮೂಲಕ ಮಾರ್ಷಲ್‌ಗಳನ್ನು ನಿಯೋಜಿಸಲಾಗುತ್ತಿದೆ. ಕೆಲ ಮತಕ್ಷೇತ್ರಗಳಲ್ಲಿ ಕಡಿಮೆ ಮಾರ್ಷಲ್‌ಗಳನ್ನು ನಿಯೋಜಿಸಿ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ತಿಳಿಸಿ ಬಿಲ್ ಸೃಷ್ಟಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ವೇತನ-ಭತ್ಯೆಗೆ 180 ಕೋಟಿ ರೂ. ವೆಚ್ಚ:

2017-18ರಿಂದ ಮಾರ್ಷಲ್‌ಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದ್ದು, ಕಳೆದ 8 ವರ್ಷದಲ್ಲಿ 180 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜತೆಗೆ ಮಾರ್ಷಲ್‌ಗಳಿಗೆ ವಾರ್ಷಿಕ 5 ಲಕ್ಷ ರೂ. ವಿಮೆ ಸೌಲಭ್ಯವಿದ್ದು, ಆಸ್ಪತ್ರೆಗೆ ದಾಖಲಾದ ವೇಳೆ ವಿಮೆ ಹಣ ಬಳಸಿಕೊಳ್ಳದೆ ಪಾಲಿಕೆ ಬೊಕ್ಕಸದಿಂದಲೇ ಹಣ ಭರಿಸುತ್ತಿರುವುದರಿಂದ ಕಾರ್ಪೋರೇಷನ್‌ಗೆ ನಷ್ಟ ಉಂಟಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲ ಬಿಲ್‌ಗಳ ಬಗ್ಗೆ ಲೆಕ್ಕಪರಿಶೋಧಕರು ಆಕ್ಷೇಪಣೆ ಎತ್ತಿದ್ದರೂ, ಈವರೆಗೂ ಸಮಜಾಯಿಷಿ ನೀಡಿಲ್ಲ.


ಇ.ಡಿ., ಲೋಕಾಯುಕ್ತದಲ್ಲಿ ದೂರು ದಾಖಲು:

ಮಾರ್ಷಲ್, ಸೂಪರ್‌ವೈಸರ್ ಹಾಗೂ ಚ್ೀ ಮಾರ್ಷಲ್‌ಗಳ ನೇಮಕ ಸೇವೆ ಹಾಗೂ ಕಾರ್ಯವೈಖರಿಯಲ್ಲಿ ಪಾರದರ್ಶಕತೆಯ ಕೊರತೆ ಕಾಡುತ್ತಿದೆ. ಇದರಿಂದ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ರೂ. ನಷ್ಟವಾಗುತ್ತಿದ್ದು, ಕಾರ್ಪೋರೇಷನ್‌ನ ಹಿರಿಯ ಅಧಿಕಾರಿಗಳು ಮೌನಕ್ಕೆ ಶರಣರಾಗಿದ್ದಾರೆ. ಈ ಸಂಬಂಧ ವರ್ಷದ ಹಿಂದೆಯೇ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಾಗಿದ್ದ ತುಷಾರ್ ಗಿರಿನಾಥ್, ಆಡಳಿತಾಧಿಕಾರಿ ಉಮಾಶಂಕರ್, ರಾಕೇಶ್ ಸಿಂಗ್, ಡಾ. ಹರೀಶ್ ಸೇರಿ 20 ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಇವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಲೋಕಾಯುಕ್ತಕ್ಕೆ ಪ್ರತ್ಯೇಕ ದೂರು ದಾಖಲಿಸಿದ್ದಾರೆ.

ಹೈಕೋರ್ಟ್‌ನಲ್ಲೂ ದಾವೆ:

ಮಾರ್ಷಲ್‌ಗಳ ನೇಮಕ ಹಾಗೂ ಅವರಿಗೆ ಖರ್ಚು ಮಾಡುತ್ತಿರುವ ಸಾರ್ವಜನಿಕರ ಹಣ ಪೋಲಾಗುತ್ತಿದ್ದು, ಪುನರ್ ವಿಮರ್ಶೆ ಮಾಡಿಕೊಳ್ಳಲು ನಿರ್ದೇಶನ ಕೋರಿ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ. ಇದು ವಿಚಾರಣಾ ಹಂತದಲ್ಲಿದ್ದು, ಕೇಸ್ ಇನ್ನೂ ಇತ್ಯರ್ಥ ಕಂಡಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net