ಮಾಜಿ ಕಾರ್ಪೋರೇಟರ್‌ನಿಂದ ಸರ್ಕಾರಿ ಜಮೀನು ಕಬಳಿಕೆ ಆರೋಪ

land-encroachment
land-encroachment
Published on

ಪ್ರಮುಖ ಮುಖ್ಯಾಂಶಗಳು

  • ಸಹಕಾರನಗರದಲ್ಲಿರುವ ಚೇರ್‌ಮನ್ಸ್ ಕ್ಲಬ್‌ ವಿರುದ್ಧ ಗೆ ಬಳಕೆ ಆರೋಪ
  • ಸಿಐಡಿ ತನಿಖೆಗೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆಗ್ರಹ
ಬೆಂಗಳೂರು: ಬಿಬಿಎಂಪಿಯ ಮಾಜಿ ಕಾರ್ಪೋರೇಟರ್ ಒಬ್ಬರು ತಮ್ಮ ಒಡೆತನದ ಕ್ಲಬ್‌ಗೆ ಕೇಂದ್ರ ಸರ್ಕಾರದ ಜಮೀನನ್ನು ಒತ್ತುವರಿ ಮಾಡಿ ಬಳಸಿಕೊಳ್ಳುತ್ತಿದ್ದಾರೆ. ನಗರದ ಆಯಾಕಟ್ಟಿನ ಜಾಗದಲ್ಲಿರುವ ಈ ಜಮೀನು ಕೋಟ್ಯಂತರ ರೂ. ಬೆಲೆಯುಳ್ಳದಾಗಿದ್ದು, ವಾಪಸ್ ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಈ ಪ್ರಕರಣದಲ್ಲಿ ಅತಿಕ್ರಮಿಸಿರುವ ಜಾಗವನ್ನು ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯಲಹಂಕ ಹೋಬಳಿ ಕೋಡಿಗೇಹಳ್ಳಿ ಮುಖ್ಯರಸ್ತೆಯ ಸಹಕಾರನಗರದಲ್ಲಿ ಬಿಬಿಎಂಪಿಯ ಮಾಜಿ ಸದಸ್ಯ ಕೆ.ಎಂ. ಚೇತನ್ ಅವರ ಒಡೆತನದ ಚೇರ್‌ಮನ್ಸ್ ಕ್ಲಬ್ ಕಾರ್ಯಾಚರಿಸುತ್ತಿದೆ. ಕ್ಲಬ್ ಜಾಗ 1.11 ಎಕರೆ ಇದ್ದು, ಇದಕ್ಕೆ ಹೊಂದಿಕೊಂಡಂತೆ ಕೇಂದ್ರದ ಇಂಧನ ಸಚಿವಾಲಯದ ನೌಕರರ ವಸತಿಗೃಹಗಳಿವೆ. ಇದಕ್ಕೆ ಸೇರಿದ 32 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು ಅದನ್ನು ಕ್ಲಬ್ ಚಟುವಟಿಕೆ ಬಳಸಿಕೊಳ್ಳಲಾಗಿದೆ. ಸುಮಾರು ಎರಡು ದಶಕದಿಂದ ಜಮೀನು ಒತ್ತುವರಿ ಮಾಡಿದ್ದರ ವಿರುದ್ಧ ಸಚಿವಾಲಯವು ಸಿಟಿ ಸಿವಿಲ್ ಕೋರ್ಟ್, ಹೈಕೋರ್ಟ್‌ಗೆ ಜಮೀನು ದಾಖಲೆ ನೀಡಿ ತನ್ನದೆಂದು ವಾದಿಸಿತ್ತು. ಇದನ್ನಾಧರಿಸಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದ್ದರೂ, ಈವರೆಗೂ ಜಮೀನು ಬಿಟ್ಟುಕೊಡಲು ಮಾಜಿ ಕಾರ್ಪೋರೇಟರ್ ಒತ್ತುತ್ತಿಲ್ಲ ಎಂದು ಎನ್.ಆರ್. ರಮೇಶ್ ಅವರು ಲೋಕಾಯುಕ್ತಕ್ಕೆ ಮಂಗಳವಾರ ದೂರು ಸಲ್ಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಆರೆ.

ಸಚಿವರ ಕುಮ್ಮಕ್ಕಿನಿಂದ ಒತ್ತುವರಿ?:

ಮಾಜಿ ಕಾರ್ಪೋರೇಟರ್ ಚೇತನ್ ಅವರು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನಿಕಟಪೂರ್ವ ಬಿಬಿಎಂಪಿಯಲ್ಲಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಪ್ರಕರಣದ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಜಮೀನು ವಾಪಸ್ ಕೊಡಿಸಲು ಮನವಿ ಮಾಡಿದ್ದರೂ, ಈವರೆಗೂ ಸ್ಪಂದನೆ ವ್ಯಕ್ತವಾಗಿಲ್ಲ. ಅಲ್ಲದೆ ಸಚಿವರ ನಿವಾಸದಿಂದ ಕೂಗಳತೆ ದೂರದಲ್ಲಿರುವ ಈ ಸ್ವತ್ತಿನ ವಿಚಾರವಾಗಿ ನೌಕರರ ಸಂಘದ ಪದಾಧಿಕಾರಿಗಳು ದಾಖಲೆಗಳನ್ನು ನೀಡಿ ನ್ಯಾಯ ಕೋರಿತ್ತು. ಇದಕ್ಕೂ ಸಚಿವರು ಸಹಮತ ವ್ಯಕ್ತಪಡಿಸದ ಕಾರಣ ಕ್ಲಬ್‌ಗೆ ಅಕ್ರಮವಾಗಿ ಜಮೀನನ್ನು ಬಳಸಿಕೊಳ್ಳಲಾಗಿದೆ ಎಂದು ಎನ್​​.ಆರ್​​. ರಮೇಶ್ ಆರೋಪಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಕೆ.ಎಂ. ಚೇತನ್ ಅವರು ಭೂ ಕಬಳಿಕೆ ಮಾಡಿರುವುದರಿಂದ ಸಿಐಡಿ ತನಿಖೆಗೆ ವಹಿಸಬೇಕು. ಸ್ವತ್ತಿನ ಸಾಚಾತನ ಆಧರಿಸಿ ಇಂಧನ ಸಚಿವಾಲಯಕ್ಕೆ ಸೇರಿದ ಜಾಗವನ್ನು ತೆರವುಗೊಳಿಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಬೇಕು ಎಂದು ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net