ಬೆಂಗಳೂರು: ನಗರದಲ್ಲಿ ಯಾವುದೇ ಇಲಾಖೆಯವರು ಅನುಮತಿ ಪಡೆಯದೆ ರಸ್ತೆ ಅಗೆತ ಕೈಗೊಂಡಲ್ಲಿ ದೊಡ್ಡ ಮೊತ್ತದ ದಂಡ ವಿಧಿಸುವ ಜತೆಗೆ ಪ್ರಕರಣ ದಾಖಲಿಸಲಾಗುವುದು ಎಂದು ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ಕೈಗೊಂಡಿರುವ ಕಾಮಗಾರಿಗಳ ಅನುಷ್ಠಾನದ ವೇಳೆ ಎದುರಾಗುವ ಸಮಸ್ಯೆಗಳ ಕುರಿತು ಶುಕ್ರವಾರ ನಡೆದ ಸಮನ್ವಯ ಸಭೆಯಲ್ಲಿ ಅವರು ಈ ನಿರ್ದೇಶನವನ್ನು ನಗರ ಅಭಿವೃದ್ಧಿಯಲ್ಲಿ ಪಾಲುದಾರಿಕೆ ಹೊಂದಿರುವ ಸಂಸ್ಥೆಗಳ ಪ್ರಮುಖರಿಗೆ ನೀಡಿದರು.
ಬೆಸ್ಕಾಂ, ಕೆಪಿಟಿಸಿಎಲ್, ಜಲಮಂಡಳಿ ಹಾಗೂ ಗೇಲ್ ಸಂಸ್ಥೆಗಳು ಪದೇ ಪದೆ ರಸ್ತೆ ಅಗೆಯುತ್ತಿವೆ. ಇದಕ್ಕಾಗಿ ಸಮನ್ವಯ ಸಾಧಿಸಿ ಕೆಲಸ ಮಾಡಲು ಹಿಂದೇಟು ಹಾಕಲಾಗುತ್ತಿದೆ. ಇನ್ನು ಮುಂದೆ ಬೇಕಾಬಿಟ್ಟಿಯಾಗಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ. ಸರ್ಕಾರಿ ಸಂಸ್ಥೆಯಾದರೂ ನಿಯಮ ಆಧರಿಸಿಯೇ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ‘ಮಾರ್ಕ್ಸ್’ ತಂತ್ರಾಂಶವನ್ನು ರೂಪಿಸಿದ್ದು, ಮನವಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ ಎಂದು ಮುಖ್ಯ ಆಯುಕ್ತರು ಸ್ಪಷ್ಟಪಡಿಸಿದರು.
ಅನುಮತಿ ಬಳಿಕವೇ ದುರಸ್ತಿಗೆ ಅವಕಾಶ:
ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗೆತಕ್ಕೆ ಮಾರ್ಕ್ಸ್ ತಂತ್ರಾಂಶದ ಮೂಲಕ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಒಪ್ಪಿಗೆ ನೀಡಬೇಕು. ಅನುಮತಿ ದೊರಕಿದ ನಂತರವೇ ದುರಸ್ತಿ ಕಾರ್ಯ ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಮುಂದಿನ ದಿನಗಳಲ್ಲಿ ರಸ್ತೆ ಅಗೆತದ ಪೂರ್ವಭಾವಿ ಪಟ್ಟಿಯನ್ನು ಸಲ್ಲಿಸಬೇಕು. ಜತೆಗೆ, ಗೂಗಲ್ ಮ್ಯಾಪ್‌ನಲ್ಲಿ ಯಾವ ರಸ್ತೆಯಲ್ಲಿ ಎಷ್ಟು ಉದ್ದದ ರಸ್ತೆ ಕತ್ತರಿಸಲಾಗುತ್ತಿದೆ ಎಂಬುದನ್ನು ಗುರುತಿಸಿ, ಎಲ್ಲ ಪಾಲಿಕೆಗಳಿಗೆ ಒದಗಿಸಬೇಕು ಎಂದು ಅವರು ಸೂಚಿಸಿದರು.
ಕೊನೆಯ ಮೈಲಿ ಸಂರ್ಪಕಿಸಲು ವೇಗ ನೀಡಿ:
ನಗರದಲ್ಲಿ ಕೊನೆಯ ಮೈಲಿ ಸಂಪರ್ಕಿಸುವ ಕೆಲಸಕ್ಕೆ ಹೆಚ್ಚಿನ ವೇಗ ನೀಡಬೇಕು. ಬಿಎಂಟಿಸಿಯಿಂದ ಫೀಡರ್ ಬಸ್ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ, ಸ್ಕೈ ವಾಕ್ ನಿರ್ಮಾಣ, ಬಸ್ ನಿಲ್ದಾಣಗಳ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಕರ್ಯವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಮಹೇಶ್ವರ್ ರಾವ್ ಸೂಚಿಸಿದರು.
ಸಭೆಯಲ್ಲಿ ಪಾಲಿಕೆಗಳ ಆಯುಕ್ತರಾದ ಡಿ.ಎಸ್. ರಮೇಶ್, ಕೆ.ಎನ್. ರಮೇಶ್, ಮೆಟ್ರೋ, ಬಿಡಿಎ, ಬೆಸ್ಕಾಂ, ಡಲ್ಟ್, ಅಗ್ನಿಶಾಮಕದಳ, ಕೆಪಿಟಿಸಿಎಲ್ ಹಾಗೂ ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಜೆಟ್ಟಿಂಗ್ ಯಂತ್ರಗಳ ಖರೀದಿ:
ನಗರದ ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿ ನಿರ್ವಹಿಸುವ ಉದ್ದೇಶದಿಂದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಗಮ ವತಿಯಿಂದ ಪ್ರತಿಯೊಂದು ನಗರ ಪಾಲಿಕೆಗೆ ಒಂದರಂತೆ 5 ವಾಟರ್ ಜೆಟ್ಟಿಂಗ್ ಯಂತ್ರಗಳನ್ನು ಖರೀದಿಸಬೇಕು. ಈ ಯಂತ್ರಗಳ ಮೂಲಕ ಪಾದಚಾರಿ ಮಾರ್ಗಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಕ್ರಮವಹಿಸಬೇಕು ಎಂದು ಮುಖ್ಯ ಆಯುಕ್ತರು ಪಾಲಿಕೆಗಳ ಕಮಿಷನರ್‌ಗಳಿಗೆ ಸೂಚಿಸಿದರು.
ಸಮಸ್ಯೆಯಿರುವ ಸ್ಥಳಗಳಲ್ಲಿ ಜಂಟಿ ಪರಿಶೀಲನೆ:
ನಗರದ ಹೆಚ್ಚಿನ ಕಡೆ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲ ರಸ್ತೆಗಳಲ್ಲಿ ಜಲಮಂಡಳಿ ಕಾಮಗಾರಿ ಮತ್ತು ಸಂಚಾರ ಪೊಲೀಸ್ ಇಲಾಖೆಯಿಂದ ಅನುಮತಿ ನೀಡಬೇಕಿದೆ. ಈ ಸಂಬಂಧ ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ಪಟ್ಟಿ ಮಾಡಿ ಆ ಸ್ಥಳಗಳಿಗೆ ಜಿಬಿಎ, ಸಂಚಾರ ಪೊಲೀಸ್ ಹಾಗೂ ಜಲಮಂಡಳಿ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಬೇಕು. ನಂತರ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿ ಆರಂಭಿಸುವಂತೆ ನಿರ್ದೇಶನ ನೀಡಲಾಗಿದೆ.