ಅನಾಥ ವಾಹನಗಳ ತೆರವಿಗೆ ಸಮಗ್ರ ಆಕ್ಷನ್​ ಪ್ಲ್ಯಾನ್

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆವಾರು ವೇಳಾಪಟ್ಟಿ ಸಿದ್ಧಪಡಿಸಿ
  • ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ರಸ್ತೆಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಅನಾಥ ವಾಹನಗಳ ತೆರವು ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಮಗ್ರ ಆಕ್ಷನ್​ ಪ್ಲ್ಯಾನ್ ರೂಪಿಸಿ, ಪಾಲಿಕೆವಾರು ಕಾರ್ಯಾಚರಣೆ ವೇಳಾಪಟ್ಟಿ ಸಿದ್ಧಪಡಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಅನಾಥ ವಾಹನಗಳ ತೆರವು, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಂಗಳವಾರ ಅಧಿಕಾರಿಗಳೊಂದಿಗೆ ನಡೆದ ವರ್ಚುವಲ್​ ಸಭೆಯಲ್ಲಿ ಮಾತನಾಡಿದರು. ಅನಾಥ ವಾಹನಗಳ ತೆರವು ಕಾರ್ಯಕ್ಕೆ ಕೆಳಹಂತದ ಅಧಿಕಾರಿಗಳ ಕಾರ್ಯಕ್ಷಮತೆಯ ಮೇಲೆ ಹಿರಿಯ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸಬೇಕು. ಕಾರ್ಯಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅನಾಥ ವಾಹನಗಳ ತೆರವು ಕಾರ್ಯದಲ್ಲಿ ಪೊಲೀಸ್​ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈವರೆಗೆ ಗುರುತಿಸಿರುವ, ದಂಡ ಪಾವತಿಸಿ ಬಿಡುಗಡೆ ಮಾಡಿರುವ ಹಾಗೂ ಟೋಯಿಂಗ್​ ಮಾಡಿರುವ ವಾಹನಗಳ ಕುರಿತು ನಿಖರ ಮಾಹಿತಿ ಸಲ್ಲಿಸಬೇಕು. ನೋಟಿಸ್​ ಅಂಟಿಸಿ ಟೋಯಿಂಗ್​ ಮಾಡಿದ ನಂತರ 15 ದಿನಗಳು ಕಳೆದಿರುವ ವಾಹನಗಳನ್ನು ಹರಾಜು ಮಾಡುವ ಸಲುವಾಗಿ ಪತ್ರಿಕಾ ಪ್ರಕಟಣೆ ನೀಡುವಂತೆ ನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಪ್ರತಿ ಸಂಚಾರಿ ಪೊಲೀಸ್​ ಠಾಣೆಗೆ ಈ ಕಾರ್ಯಕ್ಕಾಗಿ ಪ್ರತ್ಯೇಕವಾಗಿ ಇಬ್ಬರು ಪೊಲೀಸ್​ ಸಿಬ್ಬಂದಿ ನಿಯೋಜಿಸಬೇಕು. ಅಲ್ಲದೆ, ಪೊಲೀಸ್​ ಇಲಾಖೆ ಗುರುತಿಸಿರುವ ಅನಾಥ ವಾಹನಗಳಿಗೆ ನೋಟಿಸ್​ ಅಂಟಿಸುವ ಕಾರ್ಯದಲ್ಲಿ ವಾರ್ಡ್​ ಅಧಿಕಾರಿಗಳೊಂದಿಗೆ ಮಾರ್ಷಲ್​ಗಳನ್ನು ಸಹ ನಿಯೋಜಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್​, ನಗರ ಪಾಲಿಕೆ ಆಯುಕ್ತರಾದ ಡಿ.ಎಸ್​. ರಮೇಶ್​, ಪಿ. ಸುನೀಲ್​ ಕುಮಾರ್​, ಡಿ.ಎಸ್​. ರಮೇಶ್​, ಡಾ.ಕೆ.ವಿ. ರಾಜೇಂದ್ರ ಹಾಗೂ ಜಿ. ಜಗದೀಶ್​ ಇದ್ದರು.

ಮರು ಅತಿಕ್ರಮಣ ಮಾಡುವವರಿಗೆ ದಂಡ

ನಗರದಲ್ಲಿ ಇದುವರೆಗೆ 773 ಕಿ.ಮೀ. ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸುವವರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಬೇಕು. ತೆರವುಗೊಳಿಸಿದ ನಂತರ ಮರು ಅತಿಕ್ರಮಣ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರ ಜತೆಗೆ, ನಿಯಮಾನುಸಾರ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವುಗೊಳಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕ್​ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.

ನಗರದಲ್ಲಿ ಪೊಲೀಸ್​ ಇಲಾಖೆಯಿಂದ 2,533 ಹಾಗೂ ನಾಗರಿಕರಿಂದ 4,043 ಸೇರಿ ಒಟ್ಟು 6,576 ಅನಾಥ ವಾಹನಗಳನ್ನು ಗುರುತಿಸಲಾಗಿದೆ. ಈ ಪೈಕಿ 1,605 ವಾಹನಗಳಿಗೆ ನೋಟಿಸ್​ ಅಂಟಿಸಲಾಗಿದ್ದು, 263 ವಾಹನಗಳನ್ನು ಟೋಯಿಂಗ್​ ಮಾಡಲಾಗಿದೆ. ನೋಟಿಸ್​ ಅಂಟಿಸಿದ ಹಾಗೂ ಟೋಯಿಂಗ್​ ಮಾಡಿದ ವಾಹನಗಳ ಮಾಲೀಕರು 2.16 ಲಕ್ಷ ರೂ. ದಂಡ ಪಾವತಿಸಿ ತಮ್ಮ ವಾಹನಗಳನ್ನು ಬಿಡುಗಡೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲಾಗುವುದು.

— ಕಾರ್ತಿಕ್​ ರೆಡ್ಡಿ, ಬೆಂಗಳೂರು ಪೊಲೀಸ್​ ವಿಭಾಗದ ಜಂಟಿ ಪೊಲೀಸ್​ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net