ಬಿಬಿಎಂಪಿ ನಗರ ಯೋಜನೆ ವಿಭಾಗದಲ್ಲಿ 40 ಸಾವಿರ ಕೋಟಿ ಹಗರಣ ?

40-thousand-crore-scam
40-thousand-crore-scam
Published on

ಪ್ರಮುಖ ಮುಖ್ಯಾಂಶಗಳು

  • ವಿತರಣೆಯಾಗಿರುವ ಸಿಸಿ, ಒಸಿ ಪೈಕಿ ಶೇ.95 ನಕಲಿ ಎಂದು ಆರೋಪ
  • ಇ.ಡಿ., ಲೋಕಾಯುಕ್ತಕ್ಕೆ 255 ಅಧಿಕಾರಿಗಳ ವಿರುದ್ಧ ದೂರು
  • ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದಾಖಲೆ ಬಿಡುಗಡೆ
ಬೆಂಗಳೂರು: ನಿಕಟಪೂರ್ವ ಬಿಬಿಎಂಪಿ ಅವಧಿಯಲ್ಲಿ ನಗರ ಯೋಜನೆ (ಟಿಪಿಎಂ) ವಿಭಾಗದಿಂದ ಕಟ್ಟಡಗಳಿಗೆ ವಿತರಿಸಲಾಗುವ ಆರಂಭಿಕ ಪ್ರಮಾಣಪತ್ರ (ಸಿಸಿ) ಹಾಗೂ ಸ್ವಾಧೀನ ಪ್ರಮಾಣಪತ್ರಗಳಲ್ಲಿ (ಒಸಿ) ಶೇ.95 ನಕಲಿಯಾಗಿವೆ. ಈ ವಿಭಾಗದ ಅಧಿಕಾರಿಗಳು ಕಾನುನುಬಾಹಿರವಾಗಿ ನಾಗರಿಕರಿಗೆ ನೀಡಿರುವ ಪ್ರಮಾಣಪತ್ರದ ಶುಲ್ಕದ ಮೊತ್ತದ ಬಹುತೇಕ ಹಣವನ್ನು ಅಧಿಕಾರಿಗಳೇ ಗುಳುಂ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಈ ಸಂಬಂಧ ಅವರು ಶನಿವಾರ ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಲೋಕಾಯುಕ್ತದಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಪಾಲಿಕೆ ಇತಿಹಾಸದಲ್ಲೇ ಅತಿ ದೊಡ್ಡ ಹಗರಣವೆಂದು ಅವರು ಪ್ರತಿಪಾದಿಸಿದ್ದು, ಬರೋಬರಿ 40 ಸಾವಿರ ಕೋಟಿ ರೂ. ವಹಿವಾಟು ಆಗಿದೆ. ಈ ಮೊತ್ತವು ಕಾರ್ಪೋರೇಷನ್‌ಗೆ ಸಂದಾಯ ಆಗಿಲ್ಲ. ಆರ್‌ಟಿಐನಲ್ಲಿ ಪಡೆದ ಸಿಸಿ, ಒಸಿ ಸಂಬಂಧಿತ ದಾಖಲೆಯಿಂದ ಈ ಹಗರಣ ಬಯಲಾಗಿದ್ದು, ಇದರಲ್ಲಿ ಅಧಿಕಾರಿಗಳ ಪಾತ್ರ ಹೆಚ್ಚಿದೆ ಎಂದು ಅವರು ದೂರಿದ್ದಾರೆ.

71,169 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ:

2010-11ರಿಂದ 2025-26ರ ಅವಧಿಯಲ್ಲಿ ಪಾಲಿಕೆಯ ನಗರ ಯೋಜನೆ ವಿಭಾಗದಿಂದ ನೀಡಿರುವ ಸಿಸಿಗಳ ಸಂಖ್ಯೆ 4,381 ಹಾಗೂ ಒಸಿಗಳ ಸಂಖ್ಯೆ 4,587. ಇದೇ ಅವಧಿಯಲ್ಲಿ 71,169 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗಿದೆ. ಕ್ರೆಡೈ ಹಾಗೂ ಬಿಆರ್‌ಎಐ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿರುವ ಬಿಲ್ಡರ್‌ಗಳ ಸಂಖ್ಯೆ 437. ಇವರು 50ಕ್ಕೂ ಹೆಚ್ಚಿನ ಘಟಕಗಳನ್ನು ಹೊಂದಿರುವ ವಸತಿ ಸಂಕೀರ್ಣಗಳ ಸಂಖ್ಯೆ 25 ಸಾವಿರಕ್ಕೂ ಹೆಚ್ಚಿದೆ. ನಗರದಲ್ಲಿ 98 ಟೆಕ್ ಪಾರ್ಕ್, 3876 ಐಟಿ ಕಂಪನಿಗಳು, 103 ಬಿಟಿ ಕಂಪನಿಗಳು, 217 ಮಾಲ್/ಮಲ್ಟಿಫ್ಲೆಕ್ಸ್, 4500ಕ್ಕೂ ಅಧಿಕ ಬೃಹತ್ ವಾಣಿಜ್ಯ ಸಂಕೀರ್ಣಗಳು, 1.10 ಲಕ್ಷ ಕೈಗಾರಿಕೆ ಕಟ್ಟಡಗಳು, 540 ತಾರಾ ಹೋಟೆಲ್‌ಗಳು, 2850 ಸೂಪರ್ ಸ್ಪೆಷಾಲಿಟಿ ಹಾಸ್ಟಿಟಲ್/ನರ್ಸಿಂಗ್ ಹೋಂಗಳು ಹಾಗೂ 1,350 ಕಲ್ಯಾಣಮಂಟಪಗಳು ಇವೆ. ಇವುಗಳಲ್ಲಿ ನಗರ ಯೋಜನಾ ವಿಭಾಗ ಒಸಿ ನೀಡಿರುವುದು 4,587 ಮಾತ್ರ. ಉಳಿದವು ನಕಲಿ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ಅಸಲಿ ಒಸಿ ಪಡೆಯಲು ಪಾಲಿಕೆಗೆ ಒಟ್ಟು ಶುಲ್ಕದ ಶೇ.25 ಪಾವತಿಸಬೇಕು. ಆದರೆ, ಬಿಲ್ಡರ್‌ಗಳು ನಕಲಿ ಒಸಿಗಳನ್ನು ನೀಡಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.

ಬ್ಯಾಂಕ್‌ಗಳಿಗೂ ನಕಲಿ ಸಿಸಿ, ಒಸಿ ಸಲ್ಲಿಕೆ?:

ಫ್ಲ್ಯಾಟ್‌ಗಳನ್ನು ಕೊಂಡುಕೊಳ್ಳಲು ಗೃಹ ಸಾಲವನ್ನು ನೀಡುವ ಬ್ಯಾಂಕ್ ಅಧಿಕಾರಿಗಳು ಅರ್ಜಿಯೊಂದಿಗೆ ಸಿಸಿ, ಒಸಿಗಳನ್ನು ಸರಿಯಾಗಿ ಪರಾಮರ್ಶಿಸಿದಂತಿಲ್ಲ. ನಗರ ಯೋಜನೆಯ ಹಿರಿಯ ಅಧಿಕಾರಿಗಳು ಮಾಡಿರುವ ತಪ್ಪನ್ನು ಹಾಲಿ ಜಿಬಿಎ ವ್ಯಾಪ್ತಿಯ ಪಂಚ ಪಾಲಿಕೆಗಳ ಅಪರ ನಿರ್ದೇಶಕರು, ಹೆಚ್ಚುವರಿ ನಿರ್ದೇಶಕರು ತಮ್ಮ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಿಲ್ಲ. ಹಾಗಾಗಿ ಕಳೆದ 16 ವರ್ಷಗಳಲ್ಲಿ ಪಾಲಿಕೆಯ ನಗರ ಯೋಜನೆ ವಿಭಾಗದಲ್ಲಿ 40,000 ಕೋಟಿ ರೂ. ಮೊತ್ತದ ಹಾಗೂ 22 ಲಕ್ಷ ಗ್ರಾಹಕರನ್ನು ವಂಚಿಸಿರುವ ಈ ಹಗರಣವನ್ನು ಸಿಬಿಐ, ಸಿಐಡಿ ತನಿಖೆ ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net