6 ತಿಂಗಳಲ್ಲಿ 218 ಒಣ ಮರ, 1623 ಕೊಂಬೆಗಳ ತೆರವು

branches removed
branches removed
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಮಾಹಿತಿ
ಬೆಂಗಳೂರು: ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ದಕ್ಷಿಣ ನಗರ ಪಾಲಿಕೆಯ ಅರಣ್ಯ ವಿಭಾಗವು ಜಯನಗರ-1 ಮತ್ತು ಬೊಮ್ಮನಹಳ್ಳಿ-2 ವಲಯ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಒಟ್ಟು 218 ಒಣ ಮರ ಹಾಗೂ 1,623 ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿದೆ.
ಕಳೆದ ಸೆ.2ರಿಂದ ಈವರೆಗೆ ರಸ್ತೆಬದಿ, ಸರ್ಕಾರಿ ಜಾಗಗಳಲ್ಲಿ ಒಣಗಿರುವ, ಅಪಾಯ ಸ್ಥಿತಿಯಲ್ಲಿರುವ ಮರಗಳು ಹಾಗೂ ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ಕಾರ್ಯಕ್ಕಾಗಿ ಅರಣ್ಯ ವಿಭಾಗದ ಎಲ್ಲ ಸಿಬ್ಬಂದಿ ಹಾಗೂ ಗುತ್ತಿಗೆ ನೌಕರರನ್ನು ಬಳಸಿಕೊಳ್ಳಲಾಗಿದೆ. ನಾಗರಿಕರಿಗೆ ಯಾವುದೇ ತೊಂದರೆ ಆಗದಿರಲು ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ಕೈಗೊಳ್ಳಲಾಯಿತು ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಪಾಲಿಕೆಯ ಜಯನಗರ ವಲಯ ವ್ಯಾಪ್ತಿಯಲ್ಲಿನ ಪದ್ಮನಾಭನಗರ, ಜಯನಗರ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಹೆಮ್ಮಿಗೆಪುರ, ರಾಜರಾಜೇಶ್ವರಿನಗರ ಭಾಗಗಳಲ್ಲಿ 62 ಒಣ ಮರ, 581 ರೆಂಬೆ-ಕೊಂಬೆ, 56 ಅಪಾಯಕಾರಿ ಮರ, 486 ಅಪಾಯಕಾರಿ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಇದೇ ರೀತಿ ಬೊಮ್ಮನಹಳ್ಳಿ, ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ಹಾಗೂ ಬೆಳ್ಳಂದೂರು ವಾರ್ಡ್‌ನಲ್ಲಿ 130 ಒಣಗಿರುವ ಮರ, 895 ಒಣಗಿರುವ ರೆಂಬೆ-ಕೊಂಬೆ, 88 ಅಪಾಯಕಾರಿ ಮರ ಹಾಗೂ 728-ಅಪಾಯಕಾರಿ ರೆಂಬೆ ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net