ಮೆಟ್ರೋ ಬ್ಲೂ ಲೈನ್​ಗೆ ಮೇನಲ್ಲಿ ಮೊದಲೆರಡು ರೈಲು| metro

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ವಿಯಾಡಕ್ಟ್​, ಡಿಪೋ ಸಂಪರ್ಕ ಪೂರ್ಣವಾದ ಬಳಿಕವೇ ಟ್ರಯಲ್​ ರನ್​ ಆರಂಭ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ ಮೇ ಒಳಗಾಗಿ ಮೊದಲ ಎರಡು ರೈಲುಗಳು ಆಗಮಿಸಲಿದೆ. ಸಿಲ್ಕ್​ ಬೋರ್ಡ್​ ಜಂಕ್ಷನ್​&ಕೆ. ಆರ್​. ಪುರಂ ಮಾರ್ಗದಲ್ಲಿ ರೈಲುಗಳ ಟ್ರಯಲ್​ ರನ್​ ಮಾತ್ರ ವಿಯಾಡಕ್ಟ್​ ಹಾಗೂ ಡಿಪೋ ಸಂಪರ್ಕ ಕಾಮಗಾರಿ ಪೂರ್ಣಗೊಂಡ ಬಳಿಕವೇ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ಮಾರ್ಗ ಆರಂಭದಲ್ಲಿ ಎದುರಾಗುತ್ತಿರುವ ಪುನರಾವರ್ತಿತ ಅಡೆತಡೆಗಳು ಇಲ್ಲಿಯೂ ಗೋಚರಿಸುತ್ತಿವೆ. ಹಳದಿ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ವಾಣಿಜ್ಯ ಸಂಚಾರಕ್ಕೆ  ರೈಲುಗಳ ಕೊರತೆ ಇತ್ತು. ಗುಲಾಬಿ ಮಾರ್ಗಕ್ಕೆ ರೈಲುಗಳಿದ್ದರೂ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ ಪದೇಪದೆ ನಮ್ಮ ಮೆಟ್ರೋ ನೂತನ ಪ್ರಾಜೆಕ್ಟ್​ಗಳು ಸಂಕಷ್ಟದ ಸುಳಿಗೆ ಬೀಳುತ್ತಲೇ ಇದೆ.
ಬಿಇಎಂಎಲ್​ ಸಂಸ್ಥೆ ಒಪ್ಪಂದದಡಿಯಲ್ಲಿ ಒಟ್ಟು 53 ರೈಲುಗಳನ್ನು ನೀಡಬೇಕಿದ್ದು, ನೀಲಿ ಮಾರ್ಗಕ್ಕೆ 
ಮೇನಲ್ಲಿ 7, 8 ಟ್ರೈನ್​ಸೆಟ್​ಗಳನ್ನು ಒದಗಿಸಲು ಸಿದ್ಧತೆ ನಡೆಸುತ್ತಿದೆ.
ಈ 53 ರೈಲುಗಳಲ್ಲಿ 16 ರೈಲುಗಳು ಗುಲಾಬಿ ಮಾರ್ಗಕ್ಕೆ, ಮತ್ತೊಂದು 16 ರೈಲುಗಳು ಹಂತ-2ಎ (ಸಿಲ್ಕ್​ ಬೋರ್ಡ್​ ಜಂಕ್ಷನ್​&ಕೆ. ಆರ್​. ಪುರಂ, 19.75 ಕಿ.ಮೀ)ಗೆ ಹಾಗೂ 21 ರೈಲುಗಳು ಹಂತ-2ಬಿ (ಕೆಆರ್​ ಪುರಂ&ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, 38.44 ಕಿ.ಮೀ)ಗೆ ಮೀಸಲಾಗಿವೆ. ಹಂತ-2ಎ ಮತ್ತು 2ಬಿ ಒಟ್ಟಾಗಿ 58.19 ಕಿ.ಮೀ ಉದ್ದದ ನೀಲಿ ಮಾರ್ಗ 2027ಕ್ಕೆ ಕಾರ್ಯರೂಪಕ್ಕೆ ಬರುವ ನಿರೀೆ ಇದೆ.
ಡಿಪೋ ವಿಸ್ತರಣೆ ವಿಳಂಬ: ಬೈಯಪ್ಪನಹಳ್ಳಿ ಡಿಪೋವನ್ನು 28 ಸ್ಟೇಬ್ಲಿಂಗ್​ ಲೈನ್​ಗಳೊಂದಿಗೆ ವಿಸ್ತರಿಸಲಾಗುತ್ತಿದೆ. ಕಸ್ತೂರಿನಗರ ಹಾಗೂ ಕೆ. ಆರ್​. ಪುರಂ ಬಳಿ ಎರಡು ಎತ್ತರಿಸಿದ ಟ್ರ್ಯಾಕ್​ಗಳ ಮೂಲಕ ಡಿಪೋ ಸಂಪರ್ಕ ಕಲ್ಪಿಸಲಾಗುತ್ತದೆ. ಭೂಸ್ವಾಧಿನ ಸಮಸ್ಯೆಗಳ ಕಾರಣದಿಂದ ಈ ಕಾಮಗಾರಿ ವಿಳಂಬವಾಗಿದೆ.
ಬಿಎಂಆರ್​ಸಿಎಲ್​ ಹಂತ-2ಎ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್​ಗೆ ಹಾಗೂ ಹಂತ-2ಬಿ ಕಾಮಗಾರಿಯನ್ನು ಮುಂದಿನ ವರ್ಷದ ಡಿಸೆಂಬರ್​ಗೆ ಪೂರ್ಣಗೊಳಿಸುವ ಗುರಿ ಹೊಂದಿದೆ.
ನೀಲಿ ಮಾರ್ಗದ ವಿಶೇಷತೆ 
ಈಗಾಗಲೇ ಪಿಂಕ್​ ಲೈನ್​ಗೆ ಐದು ರೈಲುಗಳನ್ನು ಬಿಇಎಂಎಲ್​ ಒದಗಿಸಿದ್ದು, ಆರನೇ ರೈಲು ಶೀಘ್ರದಲ್ಲೇ ಬರಲಿದೆ. ಎಲ್ಲ ರೈಲುಗಳಲ್ಲೂ ಒಂದೇ ರೀತಿಯ ಸಿಗ್ನಲಿಂಗ್​ ತಂತ್ರಜ್ಞಾನ ಮತ್ತು ವೈಶಿಷ್ಟ$್ಯಗಳಿದ್ದು, ಬ್ಲೂ ಲೈನ್​ಗೆ ಬ್ರಾ$್ಯಂಡಿಂಗ್​ ಸ್ಟಿಕರ್​ ಹಾಗೂ ವಿಮಾನ ನಿಲ್ದಾಣ ಪ್ರಯಾಣಿಕರಿಗಾಗಿ ಲಗೇಜ್​ ರ್ಯಾಕ್​ ವಿಭಿನ್ನವಾಗಿರಲಿದೆ.
ಪಿಂಕ್​ ಲೈನ್​ಗೆ ಅನುಮೋದನೆ ಬಾಕಿ
ಪಿಂಕ್​ ಲೈನ್​ ರೈಲುಗಳಿಗೆ ಸಂಬಂಧಿಸಿದ ಪ್ರಮುಖ ಆರ್​ಡಿಎಸ್​ಒ (ರಿಸರ್ಚ್​ ಡಿಸೈನ್​ ಆ್ಯಂಡ್​ ಸ್ಟ್ಯಾಂಡರ್ಡ್ಸ್​ ಆರ್ಗನೈಸೇಶನ್​) ಪರೀಕ್ಷೆಗಳು ಇನ್ನೂ ಆರಂಭವಾಗಿಲ್ಲ. ರೈಲ್ವೆ ಮಂಡಳಿ ಎತ್ತಿರುವ ವಿನ್ಯಾಸ ಸಂಬಂಧಿತ ಪ್ರಶ್ನೆಗಳಿಗೆ ಬಿಎಂಆರ್​ಸಿಎಲ್​ ಉತ್ತರ ನೀಡುವ ಪ್ರಕ್ರಿಯೆಯಲ್ಲಿ ತೊಡಗಿದೆ.
ಆರ್​ಡಿಎಸ್​ಒ ಪ್ರಮಾಣೀಕರಣ ಹಾಗೂ ಸುರಕ್ಷತಾ ಅನುಮೋದನೆಗೆ ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಇದರಿಂದ ಮೇ ತಿಂಗಳೊಳಗೆ 7.5 ಕಿ.ಮೀ ಉದ್ದದ ಕಳೇನಅಗ್ರಹಾರ&ತಾವರೇಕೆರೆ ವಿಭಾಗವನ್ನು ಆರಂಭಿಸುವ ಯೋಜನೆಗೆ ಧಕ್ಕೆಯಾಗುವ ಸಾಧ್ಯತೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net