

ಬೆಂಗಳೂರು: ಹೆಣ್ಣೂರಿನಲ್ಲಿ ಕುಡಿದ ಮತ್ತಿನಲ್ಲಿ ದಂಪತಿ ನಡುವೆ ಜಗಳ ನಡೆದು ಪತ್ನಿಯ ಕತ್ತು ಹಿಸುಕಿ ಪತಿ ಹತ್ಯೆ ಮಾಡಿದ್ದಾನೆ.
ತಮಿಳುನಾಡು ಮೂಲದ ಹೆಣ್ಣೂರು ನಿವಾಸಿ ದಾನಮ್ಮ (45) ಕೊಲೆಯಾದ ಮಹಿಳೆ. ಈಕೆಯ ಪತಿ ವೇಲು (46) ಕೊಲೆ ಮಾಡಿ ಪರಾರಿಯಾಗಿದ್ದಾನೆ.
ದಂಪತಿ ನಗರದಲ್ಲಿ ಕೆಲ ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಿರ್ಮಾಣ ಹಂತದ ಕಟ್ಟಡದ ಬಳಿ ಶೆಡ್‌ನಲ್ಲಿ ಪುತ್ರನೊಂದಿಗೆ ವಾಸಿಸುತ್ತಿದ್ದರು.
ಶನಿವಾರ ತಡರಾತ್ರಿ ದಂಪತಿಗಳಿಬ್ಬರು ಮದ್ಯ ಸೇವಿಸಿ ಯಾವುದೋ ಸಣ್ಣ-ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಜಗಳ ಬಿಡಿಸಲು ಹೋದ ಪುತ್ರನಿಗೆ ವೇಲು ಬೆದರಿಸಿದ್ದ. ಹೀಗಾಗಿ ಪುತ್ರ ಸ್ನೇಹಿತರ ಮನೆಗೆ ಮಲಗಲು ತೆರಳಿದ್ದ. ದಂಪತಿಗಳ ನಡುವಿನ ಜಗಳ ತಾರಕಕ್ಕೇರಿ ವೇಲು ಪತ್ನಿ ದಾನಮ್ಮನ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ. ಭಾನುವಾರ ಬೆಳಗ್ಗೆ ಪುತ್ರ ಶೆಡ್‌ಗೆ ಬಂದಾಗ ಕೊಲೆಯಾದ ಪ್ರಕರಣ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹೆಣ್ಣೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ವೇಲುಗೆ ಹುಡುಕಾಟ ನಡೆಸುತ್ತಿದ್ದಾರೆ.