ಸೋಷಿಯಲಿಸಂ ಕೈಹಿಡಿದ ಮಮತಾ ಬ್ಯಾನರ್ಜಿ! ಬಂಗಾಳದಲ್ಲಲ್ಲ, ತಮಿಳುನಾಡಲ್ಲಿ!

socialism1
Published on

ಚೆನ್ನೈ : ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರಿಗೂ ಮಾರ್ಕ್ಸ್​ವಾದಿ ಎಡಪಕ್ಷಗಳಿಗೂ ಕಟ್ಟಾ ವಿರೋಧವಿರಬಹುದು. ಆದರೆ ತಮಿಳುನಾಡಿನ ಸೇಲಂನಲ್ಲಿ ಅದೇ ಹೆಸರಿನ ಯುವತಿಯು 'ಸೋಷಿಯಲಿಸಂ' ಎಂಬ ಹೆಸರಿನ ಯುವಕನನ್ನು ವರಿಸಿದ್ದಾಳೆ!

ಇಂದು ನಡೆದ ವಿವಾಹೋತ್ಸವದಲ್ಲಿ ಪಿ.ಮಮತಾ ಬ್ಯಾನರ್ಜಿ ಎಂಬ ವಧುವು ಎ.ಎಂ.ಸೋಷಿಯಲಿಸಂ ಎಂಬ ವರನ ಕೈಹಿಡಿದಳು. ಈ ಸರಳ ಸಮಾರಂಭದಲ್ಲಿ ತಮಿಳುನಾಡು ಸಿಪಿಐ ಅಧ್ಯಕ್ಷ ಆರ್​.ಮುತ್ತರಸನ್, ಸಂಸದ ತಿರುಪ್ಪುರ್​ ಕೆ.ಸುಬ್ಬರಾಯನ್ ಸೇರಿದಂತೆ ಹಲವು ಎಡಪಕ್ಷದ ನಾಯಕರು ಭಾಗವಹಿಸಿದ್ದರು. ವಧುವರರ ಹೆಸರಿನ ವಿಶಿಷ್ಟತೆಯಿಂದಾಗಿ ಕೆಲವು ದಿನಗಳಿಂದ ಇವರ ಮದುವೆ ಆಮಂತ್ರಣ ಪತ್ರಿಕೆಯು ವೈರಲ್ ಆಗಿ, ನೆಟ್ಟಿಗರ ಗಮನ ಸೆಳೆದಿತ್ತು.

ಇಂಗ್ಲೀಷ್​ ಲಿಟರೇಚರ್​ನಲ್ಲಿ ಪದವಿ ಹೊಂದಿರುವ ಈ ಮಮತಾ, ಕಾಂಗ್ರೆಸ್​ ಬೆಂಬಲಿಗರ ಕುಟುಂಬಕ್ಕೆ ಸೇರಿದವಳು. ಅವರ ತಂದೆತಾಯಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯಿಂದ ಪ್ರೇರಿತರಾಗಿ ಈ ಹೆಸರು ಇಟ್ಟಿದ್ದಾರೆ ಎನ್ನಲಾಗಿದೆ.

29 ವರ್ಷದ ವರನು ಸಿಪಿಐನ ಸೇಲಂ ಜಿಲ್ಲಾ ಕಾರ್ಯದರ್ಶಿ ಎ.ಮೋಹನ್ ಅವರ ಮಗ. ಸೋವಿಯತ್​ ಯೂನಿಯನ್​ನ ಅಂತ್ಯದ ವೇಳೆ ಹುಟ್ಟಿದ ಅವನಿಗೆ ಸೋಷಿಯಲಿಸಂ ಎಂದು ಹೆಸರು ನೀಡಿದ್ದಾರೆ. ಇನ್ನು ಅವನ ಸೋದರರ ಹೆಸರು ಕಮ್ಯುನಿಸಂ ಮತ್ತು ಲೆನಿನಿಸಂ. ಇವರ ಕುಟುಂಬವಿಡೀ ಸಿಪಿಐ ಬೆಂಬಲಿಗರಿಂದ ತುಂಬಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net