More

    ಇಂಧನ ಬೆಲೆ ಏರಿಕೆ : ಜನಹಿತ ಯೋಜನೆಗಳಿಗಾಗಿ ಹಣ ಉಳಿಸುತ್ತಿದ್ದೇವೆ ಎಂದ ತೈಲ ಸಚಿವ

    ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಏರುತ್ತಿರುವ ಸಂದರ್ಭದಲ್ಲಿ ಜನಸಾಮಾನ್ಯರು ಕೇಂದ್ರ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ತೈಲ ಸಚಿವ ಧರ್ಮೇಂದ್ರ ಪ್ರಧಾನ್, ಬೆಲೆ ಏರಿಕೆ ಗ್ರಾಹಕರಿಗೆ ಸಮಸ್ಯೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಕೋವಿಡ್​ ಹಿನ್ನೆಲೆಯಲ್ಲಿ ಸರ್ಕಾರದ ಖರ್ಚುವೆಚ್ಚಗಳು ಹೆಚ್ಚಿರುವುದರಿಂದ ಕೇಂದ್ರ ಸರ್ಕಾರ ಈ ಮೂಲಕ ಜನಹಿತ ಯೋಜನೆಗಳಿಗಾಗಿ ಹಣ ಉಳಿಸುತ್ತಿದೆ ಎಂದಿದ್ದಾರೆ.

    “ಇಂಧನ ಬೆಲೆಗಳು ಗ್ರಾಹಕರಿಗೆ ಹೊರೆಯಾಗುತ್ತಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ, ಅದರಲ್ಲಿ ಏನೂ ಅನುಮಾನವಿಲ್ಲ. ಆದರೆ ಕೋವಿಡ್ ಲಸಿಕೆಗಳಿಗಾಗಿ ಒಂದು ವರ್ಷದಲ್ಲಿ 35,000 ಕೋಟಿ ರೂ.ಗಳು ಖರ್ಚಾಗಿವೆ. ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ್ ಯೋಜನೆಯಡಿ ಬಡಜನರಿಗೆ 8 ತಿಂಗಳ ರೇಷನ್ ಒದಗಿಸಲು 1 ಲಕ್ಷ ಕೋಟಿ ರೂ. ಖರ್ಚಾಗಿದೆ. ಪಿಎಂ ಕಿಸಾನ್ ಯೋಜನೆಯಡಿ ರೈತರ ಬ್ಯಾಂಕ್​ ಖಾತೆಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಈ ಸಂಕಷ್ಟದ ಸಮಯದಲ್ಲಿ ನಾವು ಕಲ್ಯಾಣ ಯೋಜನೆಗಳ ಮೇಲೆ ವ್ಯಯ ಮಾಡಲು ಹಣ ಉಳಿಸುತ್ತಿದ್ದೇವೆ” ಎಂದು ಇಂದು ಸುದ್ದಿಗಾರರಿಗೆ ವಿವರಣೆ ನೀಡಿದ್ದಾರೆ.

    ಇದನ್ನೂ ಓದಿ: ತೈಲ ಬೆಲೆ ನೂರರ ಗಡಿ ದಾಟಿಸಿದ್ದು ಮೋದಿ ಸಾಧನೆ: ಬಳ್ಳಾರಿಯಲ್ಲಿ ಮಾಜಿ ಸಂಸದ ಉಗ್ರಪ್ಪ ಆರೋಪ

    ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನ್​, ಕಾಂಗ್ರೆಸ್​ಗೆ ಜನಸಾಮಾನ್ಯನ ಹೊರೆಯ ಬಗ್ಗೆ ಅಷ್ಟು ಕಾಳಜಿ ಇದ್ದಲ್ಲಿ ರಾಜಸ್ಥಾನ ಮತ್ತು ಮಹಾರಾಷ್ಟ್ರಗಳಲ್ಲಿ ಸೇಲ್ಸ್​ ಟ್ಯಾಕ್ಸ್​ ಕಡಿಮೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಮೋದಿ ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರ ವಾಗ್ದಾಳಿಯ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಕಾಂಗ್ರೆಸ್ ಆಳ್ವಿಕೆಯಿರುವ ಪಂಜಾಬ್, ರಾಜಸ್ಥಾನ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಇಂಧನ ಬೆಲೆ ಏಕೆ ಹೆಚ್ಚಿದೆ ಎಂಬುದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಬೇಕು. ಮುಂಬೈನಲ್ಲಿ ಅತಿಹೆಚ್ಚು ಬೆಲೆ ಇರುವುದರಿಂದ ಮಹಾರಾಷ್ಟ್ರ ಸಿಎಂಗೆ ತೆರಿಗೆಗಳನ್ನು ಕಡಿಮೆ ಮಾಡಲು ಹೇಳಲಿ” ಎಂದಿದ್ದಾರೆ. (ಏಜೆನ್ಸೀಸ್)

    VIDEO | ನೀರುತುಂಬಿದ ರಸ್ತೆಯಲ್ಲಿ ಕೂರಿಸಿ ಕಂಟ್ರಾಕ್ಟರ್​ಗೆ ಕಸದ ಅಭಿಷೇಕ!

    ಕರೊನಾ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಮುರಿದ ಸ್ವಾಬ್​ ಸ್ಟಿಕ್! ಇದು ಬಹಳ ನೋವಿನ ಕಥೆ

    ಪುಟ್ಟ ಬಾಲಕನ ಚಿಕಿತ್ಸೆಗೆ ಒದಗಿಬಂತು 16 ಕೋಟಿ ರೂ.ಗಳ ಚುಚ್ಚುಮದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts