ಸಾಯುವ ಮುನ್ನ ಗಂಡ ಗಿಫ್ಟ್​ ಕೊಟ್ಟಿದ್ದ ಚಿನ್ನದ ಸರದ ರಹಸ್ಯ ಸರಗಳ್ಳತನದ ಬಳಿಕ ಬಯಲು!

Chain Snatching
Published on

ಬೆಂಗಳೂರು: ಸಾಯುವ ಮುನ್ನ ಗಂಡ ಉಡುಗೊರೆಯಾಗಿ ನೀಡಿದ್ದ ಮಾಂಗಲ್ಯ ಸರವನ್ನು ಸರಗಳ್ಳರು ಕಿತ್ತೊಯ್ದ ಬಳಿಕ ಚಿಂತೆಗೀಡಾಗಿದ್ದ ಮಹಿಳೆಗೆ ಪೊಲೀಸರು ಕಳ್ಳರನ್ನು ಬಂಧಿಸಿದ ಬಳಿಕ ಮಾಂಗಲ್ಯ ಸರದ ಅಸಲಿಯತ್ತು ತಿಳಿದು ಮತ್ತೊಮ್ಮೆ ಶಾಕ್​ ಆಗಿದೆ.

ಮೈಕೋಲೇಔಟ್​ನಲ್ಲಿ ವಾಸವಿದ್ದ ಮಹಿಳೆಗೆ ಆಕೆಯ ಗಂಡ ಸಾಯುವ ಮುನ್ನ ಮಾಂಗಲ್ಯ ಸರವನ್ನು ಉಡುಗೊರೆಯಾಗಿ ನೀಡಿದ್ದರು. ಇತ್ತ ಮೈತುಂಬ ಸಾಲ ಮಾಡಿಕೊಂಡಿದ್ದ ಸಂತೋಷ್ ಮತ್ತು ಜೈ ಕುಮಾರ್ ಸರಗಳ್ಳತನದ ಅಡ್ಡದಾರಿ ಹಿಡಿದಿದ್ದರು.

ಮೈಕೋಲೇಔಟ್​ನಲ್ಲಿ ಆಗಾಗ ಸರ ಎಗರಿಸುವ ಕೃತ್ಯವೆಸಗುತ್ತಿದ್ದ ಸಂತೋಷ್​ ಮತ್ತು ಜೈಕುಮಾರ್​, ಸಂಚು ಹೂಡಿ ಮಹಿಳೆಯ ಚಿನ್ನದ ಸರ ಕದ್ದಿದ್ದರು. ಕದ್ದ ಸರವನ್ನು ಮಾರಲು ಚಿನ್ನದಂಗಡಿಗೆ ತೆಗೆದುಕೊಂಡು ಹೋದಾಗ ಅದರ ಅಸಲಿ ಕಥೆ ಬಯಲಾಗಿದೆ. ಅಂದರೆ ಅದು ಚಿನ್ನದ ಸರವಲ್ಲ. ಬದಲಾಗಿ ರೋಲ್ಡ್ ಗೋಲ್ಡ್ ಅನ್ನೋದು ಪತ್ತೆಯಾಗಿದೆ.

ತಕ್ಷಣ ಚಿನ್ನದಂಗಡಿಯವ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಆದರೆ, ಅಷ್ಟೊತ್ತಿಗಾಗಲೇ ಚಿನ್ನದಂಗಡಿಯವನ ಕೈಯಿಂದ ಸರಗಳ್ಳರು ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಮೈಕೋಲೇಔಟ್ ಪೊಲೀಸರು ಸಿಸಿಟಿವಿ ಆಧಾರದಲ್ಲಿ ಸರಗಳ್ಳರಾದ ಸಂತೋಷ್ ‘ಮತ್ತು ಜೈ ಕುಮಾರ್​ನನ್ನು ಅರೆಸ್ಟ್ ಮಾಡಲಾಯಿತು.

ಇದಾದ ಬಳಿಕ ಸರಗಳ್ಳರು ನೀಡಿದ್ದ ಹೇಳಿಕೆ ಆಧಾರದಲ್ಲಿ ತನಿಖೆ ನಡೆಸಿ, ಚಿನ್ನದ ಸರ ಕಳೆದುಕೊಂಡ ಮಹಿಳೆಯನ್ನು ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ತನ್ನ ಪತಿ ಕೊಟ್ಟಿದ್ದು ಚಿನ್ನದ ಮಾಂಗಲ್ಯ ಸರವಲ್ಲ. ಅದು ರೋಲ್ಡ್ ಗೋಲ್ಡ್ ಅನ್ನೋದು ಆಕೆಗೆ ಗೊತ್ತಾಗಿದೆ. ಸಾಯುವ ಮುನ್ನ ಪತಿ ಪ್ರೀತಿಯಿಂದ ತಂದುಕೊಟ್ಟಿದ್ದ ಸರ ಎಂದು ಬಾಯ್ಬಿಟ್ಟಿದ್ದಾಳೆ.

ಸಾಯುವ ಮುನ್ನ ಸಂತ್ರಸ್ತೆ ಪತಿಯು ಚಿನ್ನದ ಸರ ಅಂತ ಯಾಮಾರಿ ರೋಲ್ಡ್ ಗೋಲ್ಡ್ ತಂದು ಕೊಟ್ಟಿದ್ದ ಕಥೆ ಸರಗಳ್ಳತನದ ಬಳಿಕ ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಿ ಪೊಲೀಸರು ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net