

ಭುವನೇಶ್ವರ: ಬೈಕ್ ಮತ್ತು ಸ್ಕೂಟರ್ನಲ್ಲಿ ಹೆಲ್ಮೆಟ್ ಹಾಗೂ ಕಾರಿನಲ್ಲಿ ಬೆಲ್ಟ್ ಧರಿಸದಿದ್ದರೆ ದಂಡ ವಿಧಿಸುವುದು ಸಾಮನ್ಯ. ಆದರೆ, ಒಡಿಶಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣ ನೀಡಿ ಟ್ರಕ್ ಡ್ರೈವರ್ ಮತ್ತು ಆತನ ಸಹಾಯಕನಿಗೆ ದಂಡ ವಿಧಿಸಿದ್ದಾರೆ.
ಒಡಿಶಾದ ಜಾಜ್ಪುರ್ ಜಿಲ್ಲೆಯ ಚಾಂದಿಖೋಲ್ ಬಳಿ ನಡೆದಿದೆ. ಮೂಲಗಳ ಪ್ರಕಾರ ಭುವನೇಶ್ವರದ ಹನ್ಸಪಾಲ್ ಮೂಲದ ಜ್ಯೋತಿರಂಜನ್ ಸಾಹೋ ಎಂಬುವರಿಗೆ ಸೇರಿದ ಟ್ರಕ್ ಅನ್ನು ಹೈವೇ ಪೊಲೀಸರು ಚಾಂದಿಖೋಲ್ ಚಾಕ್ ಬಳಿ 2020ರ ಜುಲೈ 27ರಂದು ತಡೆಹಿಡಿದಿದ್ದರು. ಈ ವೇಳೆ ಕೋವಿಡ್ ನಿಯಮವೂ ಸಹ ಜಾರಿಯಲ್ಲಿತ್ತು.
ಚಾಲಕ ಪ್ರಕಾಶ್ ಪಾಣಿ ಮಾಸ್ಕ್ ಅನ್ನು ಸರಿಯಾಗಿ ಧರಿಸದಿದ್ದಕ್ಕೆ ದಂಡ ವಿಧಿಸಲಾಗಿತ್ತು. ಇದೇ ವಿಚಾರವಾಗಿ ಪೊಲೀಸ್ ಅಧಿಕಾರಿ ಮತ್ತು ಚಾಲಕನ ನಡುವೆ ವಾಗ್ವಾದ ಶುರುವಾಗಿತ್ತು. ಇದರ ಬೆನ್ನಲ್ಲೇ ಪೊಲೀಸ್ ಅಧಿಕಾರಿ ಹೆಲ್ಮೆಟ್ ಧರಿಸದೇ ಪ್ರಯಾಣ ಮಾಡಿದ್ದೀರಿ ಎಂದು ಚಾಲಕ ಮತ್ತು ಸಹಾಯಕನಿಗೆ 1000 ರೂ. ದಂಡ ವಿಧಿಸಿ ಚಲನ್ ನೀಡಿದ್ದರು.
ಈ ಘಟನೆ ನಡೆದ ಅನೇಕ ದಿನಗಳ ನಂತರ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಚಲನ್ ವೈರಲ್ ಆಗಿದ್ದು, ನೆಟ್ಟಿಗರು ಮತ್ತೊಮ್ಮೆ ಪೊಲೀಸರ ಕ್ರಮವನ್ನು ಟೀಕಿಸುತ್ತಿದ್ದಾರೆ. (ಏಜೆನ್ಸೀಸ್)