

ಹೊಸಪೇಟೆ(ಬಳ್ಳಾರಿ): ವಿಜಯನಗರ ಜಿಲ್ಲೆ ರಚನೆಗೆ ಬೆಂಬಲ ಸೂಚಿಸಿ ಇಂಗ್ಲಿಷ್ನಲ್ಲಿ ಪತ್ರ ಬರೆದ ನಟ, ನಿರ್ಮಾಪಕ ಅಜಯ್ ರಾವ್ ವಿರುದ್ಧ ಬಳ್ಳಾರಿ ಮಂದಿ ಫುಲ್ ಗರಂ ಆಗಿದ್ದಾರೆ.
ನನ್ನ ಜನ್ಮಭೂಮಿ, ನನ್ನ ಸ್ವಂತ ಊರು ಹೊಸಪೇಟೆ ವಿಜಯನಗರ ಜಿಲ್ಲೆ ಎಂದು ಘೋಷಣೆಯಾಗಿರುವುದು ನನಗೆ ಒಂದು ದೊಡ್ಡ ಸಂಭ್ರಮ. ಹಾಗಾಗಿ ನಮ್ಮ ರಾಜ್ಯದ ಅರಣ್ಯ ಮತ್ತು ಪರಿಸರ ಖಾತೆ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ, "ವಿಜಯನಗರ ಜಿಲ್ಲಾ ಕಾರಣೀಭೂತ" ಸನ್ಮಾನ್ಯ ಶ್ರೀ ಆನಂದ ಸಿಂಗ್ರವರಿಗೆ ನನ್ನ ಬೆಂಬಲ ಹಾಗು ಮೆಚ್ಚುಗೆಯ ಪತ್ರವನ್ನು ನೀಡುವುದರ ಮೂಲಕ ಸಂತಸವನ್ನು ಹಂಚಿಕೊಂಡೆ ಎಂದು ಅಜಯ್ ರಾವ್ ಅವರು ಫೇಸ್ಬುಕ್ನಲ್ಲಿ ಪತ್ರದ ಸಮೇತ ಪೋಸ್ಟ್ ಮಾಡಿದ್ದಾರೆ.
ಪತ್ರದಲ್ಲಿ ಇಂಗ್ಲಿಷ್ ಭಾಷೆ ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಿಗರು ನಿಮಗೆ ಕನ್ನಡ ಬರುವುದಿಲ್ಲವಾ? ಕನ್ನಡದಲ್ಲಿ ಯಾಕೆ ಮನವಿ ಪತ್ರವಿಲ್ಲ? ಕನ್ನಡ ಭಾಷೆಗೆ ಅವಮಾನ ಮಾಡಬೇಡಿ. ನಿಮ್ಮ ಬಗ್ಗೆ ನಮಗೆ ಅಭಿಮಾನ ಇದೆ ಅದನ್ನು ಕಳೆದುಕೊಳ್ಳ ಬೇಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ಜಿಲ್ಲಾ ರಚನೆ ವಿರುದ್ಧವೂ ಅಸಮಾಧಾನ ಹೊರಹಾಕಿರುವ ನೆಟ್ಟಿಗರು ಜಿಲ್ಲಾ ರಚನೆಯಿಂದ ದುಂದುವೆಚ್ಚ ಆಗುತ್ತದೆ. ತೆರಿಗೆಯ ಹಣ ಜನರಿಗೆ ಹೊರೆ ಬೀಳುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಆದರೆ, ಇದ್ಯಾವುದಕ್ಕೂ ಅಜಯ್ ರಾವ್ ಅವರು ಪ್ರತಿಕ್ರಿಯೆ ನೀಡಿಲ್ಲ. ಮುಂದೆ ಯಾವ ರೀತಿ ಉತ್ತರ ನೀಡಲಿದ್ದಾರೆ ಎಂಬ ಕುತೂಹಲವಿದೆ. (ಏಜೆನ್ಸೀಸ್)