4 ವರ್ಷದ ಮಗುವನ್ನು ಕುಡಗೋಲಿನಿಂದ ಕೊಚ್ಚಿ ಕೊಂದ ದೊಡ್ಡಪ್ಪ! ದೇವಸ್ಥಾನದ ಮುಂದೆ ಹರಿಯಿತು ರಕ್ತದೋಕುಳಿ

ಬೊಯ
Published on

ಬೆಳಗಾವಿ: ನಾಲ್ಕು ವರ್ಷದ ಬಾಲಕನನ್ನು ಕುಡಗೋಲಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿಚಾರದಲ್ಲಿ ನಡೆದ ಜಗಳದಿಂದಾಗಿ ಈ ಕೊಲೆ ನಡೆದಿರುವುದಾಗಿ ತಿಳಿಸಲಾಗಿದೆ.

ಮಾರುತಿ ವೀರಪ್ಪ ಸಂಕನ್ನವರ (4) ಕೊಲೆಯಾದ ಬಾಲಕ. ಮಗುವನ್ನು ಆಟವಾಡಲೆಂದು ಮನೆಯಲ್ಲೇ ಬಿಟ್ಟು ತಂದೆ ತಾಯಿ ಹೋಲಕ್ಕೆ ಕೆಲಸಕ್ಕೆ ಹೋಗಿದ್ದರು. ಮಗು ಭಿರೇಶ್ವರ ದೇವಸ್ಥಾನದ ಮುಂಭಾಗ ಆಟವಾಡುತ್ತಿದ್ದಾಗ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮಗುವಿನ ದೊಡ್ಡಪ್ಪ ಈರಪ್ಪ ಸಂಕನ್ನವರ ಈ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

ಮೃತ ಬಾಲಕನ ತಂದೆ ಹಾಗೂ ಕೊಲೆ ಮಾಡಿದ ಆರೋಪಿ ಈರಪ್ಪನ ನಡುವೆ ಈ ಹಿಂದೆ ಜಮೀನು ವಿಚಾರದಲ್ಲಿ ಗಲಾಟೆ ನಡೆದಿತ್ತು. ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ‌ ಸಂಬಂಧಿಸಿದಂತೆ ವೈಮನಸ್ಸು ಉಂಟಾಗಿತ್ತು. ಅದೇ ಕಾರಣದಿಂದಾಗಿ ಮಗುವನ್ನು ಕೊಲೆ ಮಾಡಿರುವುದಾಗಿ ತಿಳಿಸಲಾಗಿದೆ. ಮುರಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಹುಡುಕಾಟ ನಡೆಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net