ನಿದ್ದೆ ಮಂಪರಿನಲ್ಲಿ ಕಾರನ್ನೇ ಕಳೆದುಕೊಂಡ ಕ್ಯಾಬ್ ಡ್ರೈವರ್!

Ertiga
Published on

ಬೆಂಗಳೂರು: ಕಾರಿನಲ್ಲಿ ಬಿಟ್ಟಿದ್ದ ಕೀ ಕದ್ದು, ಅದನ್ನು ಹುಡುಕಿಕೊಡುವ ನೆಪದಲ್ಲಿ ಚಾಲಕನ ಗಮನ ಬೇರೆಡೆ ಸೆಳೆದ ಖದೀಮರ ಗುಂಪೊಂದು ಕಾರು ಕದ್ದು ಪರಾರಿಯಾಗಿದೆ.

ತಾವರೆಕೆರೆ ನಿವಾಸಿ ಕ್ಯಾಬ್ ಚಾಲಕ ಲೋಕೇಶ್ (45) ಕಾರು ಕಳೆದುಕೊಂಡವರು. ಲೋಕೇಶ್ ಕಳೆದ 5 ತಿಂಗಳಿನಿಂದ ಎರ್ಟಿಗಾ ಕಾರನ್ನು ಓಲಾ/ಉಬರ್‌ಗೆ ಆಟ್ಯಾಚ್ ಮಾಡಿಕೊಂಡು ಬಾಡಿಗೆಗೆ ಓಡಿಸುತ್ತಿದ್ದರು. ಜ.7ರಂದು ಸಂಜೆ 5 ಗಂಟೆಗೆ ಲಾಗಿನ್ ಆಗಿದ್ದರು. ಜ. 8ರಂದು ತಡರಾತ್ರಿ 2.30ರಲ್ಲಿ ಎಚ್‌ಎಸ್‌ಆರ್ ಲೇಔಟ್‌ನಿಂದ ಕೆಆರ್ ಪುರಕ್ಕೆ ಬಾಡಿಗೆ ಸಿಕ್ಕಿತ್ತು.

ಲೋಕೇಶ್ ಕೆಆರ್‌ಪುರದಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದ ಮನೆಗೆ ವಾಪಸ್ಸಾಗುತ್ತಿದ್ದರು. ಮಾರ್ಗಮಧ್ಯೆ ನಿದ್ದೆ ಮಂಪರು ಬಂತೆಂದು ಇಂದಿರಾನಗರದ ಕರಾಚಿ ಬೇಕರಿ ಎದುರು ಕಾರನ್ನು ನಿಲುಗಡೆ ಮಾಡಿ ಕಾರಿನೊಳಗೆ ನಿದ್ದೆಗೆ ಜಾರಿದ್ದರು. ಗಾಳಿ ಬರಲೆಂದು ಬಲಭಾಗದ ಡೋರ್‌ನ ಗಾಜನ್ನು ಗ್ಲಾಸ್ ಸ್ವಲ್ಪ ತೆರೆದಿಟ್ಟಿದ್ದರು.

ಕಳ್ಳರ ತಂಡ: ಬೆಳಗಿನ ಜಾವ 5 ಗಂಟೆಯಲ್ಲಿ ಅಪರಿಚಿತನೊಬ್ಬ ಲೋಕೇಶ್ ಅವರನ್ನು ಎಬ್ಬಿಸಿ, ನಿಮ್ಮ ಕಾರಿನ ಕೀಯನ್ನು ಯಾರೋ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದ್ದ. ಕಾರಿನ ಕೀ ಇಲ್ಲದಿರುವುದನ್ನು ಕಂಡು ಗಾಬರಿಯಾದ ಲೋಕೇಶ್, ಅಪರಿಚಿತನ ಮಾತನ್ನು ನಂಬಿ ಕೀ ಹುಡುಕಲು ಕಾರಿನಿಂದ ಇಳಿದಿದ್ದರು. ಕೀ ಎತ್ತಿಕೊಂಡ ವ್ಯಕ್ತಿ ಕಟ್ಟಡವೊಂದರ ಬಳಿ ಹೋದ ಎಂದು ಕರೆದುಕೊಂಡು ಹೋಗಿದ್ದ. ಆಗ ಸಮೀಪದಲ್ಲೇ ಇದ್ದ ಮೂವರು ಕಾರನ್ನು ಸ್ಟಾರ್ಟ್ ಮಾಡಿ ಕೀ ಹುಡುಕಲು ಬಂದಿದ್ದ ವ್ಯಕ್ತಿಯನ್ನೂ ಕಾರಿನಲ್ಲಿ ಹತ್ತಿಸಿಕೊಂಡು ಕೋರಮಂಗಲದ ಕಡೆ ಪರಾರಿಯಾಗಿದ್ದಾರೆ.

ಅದೇ ರಸ್ತೆಯಲ್ಲಿ ಬಂದ ಬೈಕ್ ಸವಾರನ ಸಹಾಯದಿಂದ ಲೋಕೇಶ್ ಸುತ್ತಮುತ್ತ ಹುಡುಕಾಡಿದರೂ ಆರೋಪಿಗಳ ಸಣ್ಣ ಸುಳಿವೂ ಸಿಕ್ಕಿಲ್ಲ. ಈ ಬಗ್ಗೆ ಲೋಕೇಶ್ ಪೊಲೀಸರಿಗೆ ದೂರು ನೀಡಿದ್ದು, ಇಂದಿರಾನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಕಾರು ಕಳ್ಳತನವಾದ ಸ್ಥಳದ ಸುತ್ತ-ಮುತ್ತ ಅಳವಡಿಸಲಾಗಿರುವ ಸಿಸಿ ಕ್ಯಾಮರಾ ಪರಿಶೀಲಿಸಲಾಗಿದೆ. ವೃತ್ತಿಪರ ಕಾರು ಕಳ್ಳರು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net