ಪ್ರಾಕೃತಿಕ ವಿಕೋಪ ಎದುರಿಸಲು ಸನ್ನದ್ಧರಾಗಿ

Kkl_May_29_Sunil Sabhe 1
Published on

ಕಾರ್ಕಳ: ಪ್ರಾಕೃತಿಕ ವಿಕೋಪಕ್ಕೆ ಕಾರ್ಕಳ ಕ್ಷೇತ್ರದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳಬೇಕು. ಎಲ್ಲ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಸಮಸ್ಯೆ ಅಥವಾ ಜವಾಬ್ದಾರಿಗಳನ್ನು ನಮ್ಮದಲ್ಲ ಎಂದು ಬೇರೆ ಇಲಾಖೆಗಳಿಗೆ ವರ್ಗಾಯಿಸದೇ ಯಾವುದೇ ಸಮಸ್ಯೆ ಬಂದರೂ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಎದುರಿಸಬೇಕು ಎಂದು ಶಾಸಕ ಸುನಿಲ್‌ಕುವಾರ್ ನಿರ್ದೇಶಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕಾರ್ಕಳ ಮತ್ತು ಹೆಬ್ರಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಾಕೃತಿಕ ವಿಕೋಪ ಕುರಿತ ಸಭೆಯಲ್ಲಿ ಮಾತನಾಡಿದರು.

ಚರಂಡಿ ನೀರಿನಿಂದ ಹಿಡಿದು ಕರೆಂಟ್, ಕೋವಿಡ್‌ವರೆಗೆ ಎಲ್ಲ ಸಮಸ್ಯೆಗಳ ನಿವಾರಣೆ ಜವಾಬ್ದಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಆಡಳಿತ ಅಧಿಕಾರಿಯವರದ್ದು. ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರಕ್ಕಾಗಿ ಸಾರ್ವಜನಿಕರೊಂದಿಗೆ ಸೌಹಾರ್ದಯುತ ವಾತುಕತೆ ನಡೆಸಬೇಕು. ಫೋನ್‌ಗಳನ್ನು ಸದಾ ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ರಸ್ತೆ ಸುರಕ್ಷತೆಗೆ ಗಮನಹರಿಸಿ

ತಾಲೂಕಿನಲ್ಲಿ ಸುವಾರು ಎಂಟು ಕಡೆಗಳಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ. ಈ ಸ್ಥಳಗಳ ಬಗ್ಗೆ ಮುಖ್ಯವಾಗಿ ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನಿಗಾ ವಹಿಸಬೇಕು. ರಸ್ತೆಯ ಸುರಕ್ಷತೆಯ ಬಗ್ಗೆ ಗಮನ ಹರಿಸಿ ಯಾವುದೇ ಅವಡಗಳು ನಡೆಯದಂತೆ ಕ್ರಮ ವಹಿಸುವ ಅಗತ್ಯವಿದೆ ಎಂದರು.

ಮೆಸ್ಕಾಂ ಇಲಾಖೆ ಏನೇ ಸಮಸ್ಯೆಯಾದರೂ ಗರಿಷ್ಠ 6 ಗಂಟೆಯೊಳಗೆ ವಿದ್ಯುತ್ ಸಂಪರ್ಕ ಸರಿಪಡಿಸಿಕೊಡುತ್ತೇವೆ ಎಂಬ ಗುರಿಯೊಂದಿಗೆ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು. ಮಳೆಗಾಲದ ಸಂದರ್ಭದಲ್ಲಿ ಮಕ್ಕಳ ಚಲನವಲನದ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ. ಈ ಬಗ್ಗೆ ಉಭಯ ತಾಲೂಕಿನ ತಹಸೀಲ್ದಾರ್, ಇಒ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಂಟಿಯಾಗಿ ಶಾಲಾ ಮುಖ್ಯ ಶಿಕ್ಷಕಕರೊಂದಿಗೆ ವಾತುಕತೆ ನಡೆಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಕುಂದಾಪುರ ವಿಭಾಗ ಸಹಾಯಕ ಕಮಿಷನರ್ ರಶ್ಮಿ ಆರ್., ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಕಾರ್ಕಳ ತಾಲೂಕು ತಹಸೀಲ್ದಾರ್ ಪ್ರದೀಪ್ ಆರ್., ಹೆಬ್ರಿ ತಾಲೂಕು ತಹಸೀಲ್ದಾರ್ ಪ್ರಸಾದ್, ಕಾರ್ಕಳ ತಾ.ಪಂ. ಇಒ ಪ್ರಶಾಂತ್ ರಾವ್, ಹೆಬ್ರಿ ತಾ.ಪಂ. ಇಒ ವಿಜಯಾ, ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net