ಮಾಜಿ ಶಾಸಕರ ಪತ್ನಿಯಿಂದ ಪಾಲಿಕೆ ಆಸ್ತಿ ದುರ್ಬಳಕೆ!

BBMP Property-NR Ramesh
Published on

ಬೆಂಗಳೂರು: ಬಿಬಿಎಂಪಿಯಿಂದ ಹಸು ಸಾಕಣೆಗೆ ಗುತ್ತಿಗೆ ಪಡೆದ ಸ್ಥಳವನ್ನು ಮಾಜಿ ಶಾಸಕರ ಪತ್ನಿ ದುರ್ಬಳಕೆ ಮಾಡಿಕೊಂಡು ವಸತಿ ಕಟ್ಟಡ ಮತ್ತು ಕೈಗಾರಿಕೆಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

ಬಿಬಿಎಂಪಿ ವತಿಯಿಂದ ಸುಮಾರು 200ಕ್ಕೂ ಅಧಿಕ ಆಸ್ತಿಗಳನ್ನು ಕಡಿಮೆ ಹಣಕ್ಕೆ ವರ್ಷಗಳಿಗೂ ಅಧಿಕ ಅವಧಿವರೆಗೆ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುವಂತೆ ಕಡಿಮೆ ಹಣಕ್ಕೆ ಗುತ್ತಿಗೆ ನೀಡಲಾಗುತ್ತದೆ. ಅದೇ ರೀತಿ 1975ರಲ್ಲಿ ಅಂದಿನ ಶಾಸಕ ಹಮೀದ್ ಶಾ ಅವರ ಪತ್ನಿ ಮೀದಾ ಬೇಗಂ ಅವರಿಗೆ ಪುಲಕೇಶಿ ನಗರ ವಾರ್ಡ್‌ನ ಫ್ರೇರೇಜರ್ ಟೌನ್ ಬಳಿ 80*80 ಅಳತೆ (5,600 ಚ.ಅಡಿ) ಸ್ಥಳವನ್ನು ಹಸು ಸಾಕಣೆಗೆ ವಾರ್ಷಿಕ 600 ರೂ. ಶುಲ್ಕದಂತೆ ಗುತ್ತಿಗೆ ನೀಡಲಾಗಿತ್ತು. ಅಂದಿನ ಆಡಳಿತಾಧಿಕಾರಿ ಎಸ್. ನೀಲಕಂಠೇಗೌಡ ಅವರು 1975ರ ಡಿ.29ರಂದು ಈ ಸ್ವತ್ತನ್ನು ಬೇರಾವುದೇ ಉದ್ದೇಶಕ್ಕೆ ಬಳಸದಂತೆ ಸ್ಪಷ್ಟವಾದ ಷರತ್ತುಗಳನ್ನು ವಿಧಿಸಿ ಗುತ್ತಿಗೆಗೆ ನೀಡಿದ್ದರು. ಆದರೆ, ಈ ಸ್ಥಳವನ್ನು ದುರ್ಬಳಕೆ ಮಾಡಿಕೊಂಡು ವಸತಿ ಕಟ್ಟಡ, ಐಸ್‌ಕ್ರೀಂ ಕಾರ್ಖಾನೆ ಹಾಗೂ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗಿದೆ. ಇದನ್ನೂ ಓದಿರಿ ಅಭಿವೃದ್ಧಿ ಕಾರ್ಯಕ್ಕಾಗಿ 33000 ಕೋಟಿ ರೂ. ಸಾಲ ಪಡೆಯಲಿದೆ ರಾಜ್ಯ ಸರ್ಕಾರ

ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಈ ಕುರಿತು ಬಿಎಂಟಿಎಫ್​ಗೆ ದೂರು ನೀಡಿದ್ದಾರೆ. ಪಾಲಿಕೆಯಿಂದ ನೀಡಲಾದ ಆಸ್ತಿಯ ಗುತ್ತಿಗೆ ಅವಧಿ 2025ಕ್ಕೆ ಮುಕ್ತಾಯವಾಗಲಿದ್ದು, ಅದನ್ನು ಪುನಃ ನವೀಕರಣ ಮಾಡುವಂತೆ ಮೀದಾ ಬೇಗಂ ಅವರು ಪಾಲಿಕೆಗೆ 2019ರಲ್ಲಿ ಮನವಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ 45 ವರ್ಷಗಳಿಂದ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿ ದುರ್ಬಳಕೆ ಮಾಡಿಕೊಂಡಿರುವ ಆಸ್ತಿಯನ್ನು ಮರುನವೀಕರಣ ಮಾಡಿಕೊಡಬಾರದು. ಜತೆಗೆ, ಗುತ್ತಿಗೆ ಆಸ್ತಿ ದುರ್ಬಳಕೆ ಮಾಡಿಕೊಂಡಿರುವುದನ್ನು ಪರಿಶೀಲಿಸಿ ಆಸ್ತಿಯನ್ನು ಪಾಲಿಕೆ ವಶಕ್ಕೆ ಪಡೆಯುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಅನಧಿಕೃತ ಆಸ್ತಿಗೆ ಕಂದಾಯ: ಪಾಲಿಕೆಯಿಂದ ಗುತ್ತಿಗೆ ನೀಡಲಾದ ಆಸ್ತಿಯಲ್ಲಿ ಕಾನೂನುಬಾಹಿರವಾಗಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಪುಲಕೇಶಿನಗರದ ಕಂದಾಯ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಅನುಮತಿ ನೀಡಿದ್ದಾರೆ. ಜತೆಗೆ, ವಾರ್ಷಿಕ ಕಂದಾಯವನ್ನು ಕೂಡ ನಿಗದಿ ಮಾಡಲಾಗಿದೆ. ಪಾಲಿಕೆ ಆಸ್ತಿ ದುರ್ಬಳಕೆಗೆ ನೆರವಾದ ಪಾಲಿಕೆ ಅಧಿಕಾರಿಗಳ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸುವಂತೆ ಬೆಂಗಳೂರು ಮಹಾನಗರ ಕಾರ್ಯಾಚರಣೆ ಪಡೆ (ಬಿಎಂಟಿಎಫ್​) ಪೊಲೀಸ್ ಅಧೀಕ್ಷಕರಿಗೆ ಎನ್.ಆರ್. ರಮೇಶ್ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net