

ಬೆಂಗಳೂರು: ಕರೊನಾ ವೈರಸ್ ಹಾವಳಿಯಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು 33 ಸಾವಿರ ಕೋಟಿ ರೂ. ಸಾಲ ಪಡೆಯಲು ನಿರ್ಧರಿಸಿದ್ದು, ಅದಕ್ಕೆ ಮಂಗಳವಾರ ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆದಿದೆ.
ರಾಜ್ಯದ ಒಟ್ಟು ನಿವ್ವಳ ಉತ್ಪನ್ನದ (ಜಿಎಸ್‌ಡಿಪಿ) ಶೇ. 2ರಷ್ಟು ಅಂದರೆ 36 ಸಾವಿರ ಕೋಟಿ ರೂ. ಹೆಚ್ಚುವರಿ ಸಾಲವನ್ನು ಯಾವುದೇ ಷರತ್ತಿಗೆ ಒಳಪಡದೇ ಪಡೆಯಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಅದರ ಆಧಾರದ ಮೇಲೆ ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ 33 ಸಾವಿರ ಕೋಟಿ ರೂ. ಸಾಲ ಪಡೆಯಲು ಸರ್ಕಾರ ನಿರ್ಧರಿಸಿದೆ. ಕೇಂದ್ರದಿಂದ ಜಿಎಸ್‌ಟಿ ಪರಿಹಾರ 11 ಸಾವಿರ ಕೋಟಿ ರೂ. ಬರಬೇಕಿತ್ತು. ಬರಲಿಲ್ಲ. ಜತೆಗೆ ಕರೊನಾ ಕಾರಣದಿಂದ ರಾಜಸ್ವ ಸಂಗ್ರಹ ಕುಂಠಿತವಾಗಿದೆ. ಹಾಗಾಗಿ ಮತ್ತಷ್ಟು ಸಾಲ ಪಡೆಯುವ ಅನಿವಾರ್ಯತೆ ಎದುರಾಗಿದೆ. ಹೆಚ್ಚುವರಿ ಸಾಲ ಹೊರೆಯಾದರೂ ಬೇರೆ ದಾರಿ ಇಲ್ಲ ಎಂದು ವಿವರಿಸಿದರು.