More

    ಡೊನೇಷನ್ ಹಾವಳಿ ನಿಲ್ಲಿಸಲು ಆಗ್ರಹ

    ಶಿವಮೊಗ್ಗ: ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಷನ್ ನೆಪದಲ್ಲಿ ಹಗಲು ದರೋಡೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರ್ ಅಹಮ್ಮದ್ ಆಗ್ರಹಿಸಿದರು.

    ಜೂನ್ ತಿಂಗಳು ಸಮೀಪಿಸುತ್ತಿರುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಈಗಾಗಲೇ ಪ್ರವೇಶಾತಿ ಪ್ರಕ್ರಿಯೆ ಮುಗಿದಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಮಿತಿ ಮೀರಿ ಡೊನೇಷನ್ ಪಡೆಯುತ್ತಿವೆ. ಪ್ರತಿ ವರ್ಷ ಶೇ.15ರಷ್ಟು ಶುಲ್ಕ ಹೆಚ್ಚಿಸುತ್ತಾರೆ. ಸರ್ಕಾರ ಕೂಡ ಇದಕ್ಕೆ ಅನುಮೋದನೆ ನೀಡುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
    ರಾಜ್ಯದಲ್ಲಿ ಶುಲ್ಕ ನಿಯಂತ್ರಣ ಪ್ರಾಧಿಕಾರವಿದ್ದರೂ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ತಪ್ಪಿಸಿದೆ. ಅದೇ ರೀತಿ ಎಲ್ಲ ರಾಜ್ಯಗಳು ಖಾಸಗಿ ಶಾಲೆಗಳ ಶುಲ್ಕ ನಿಗದಿ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ರಾಜ್ಯ ಸರ್ಕಾರ ಹೈಕೋರ್ಟ್ ಮುಂದೆ ಸಮರ್ಪಕ ವಾದ ಮಂಡಿಸಿಲ್ಲ. ಇನ್ನೊಂದೆಡೆ ಖಾಸಗಿ ಶಾಲೆ ಮೋಹಕ್ಕೆ ಒಳಗಾದ ಪಾಲಕರು ಡೊನೇಷನ್ ವಿರುದ್ಧ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಡೊನೇಷನ್ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು. ಆಪ್ ಮುಖಂಡರಾದ ಹರೀಶ್, ಯೂಸೂಫ್, ಸಾಹೀರ್, ಗೌಸ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts