ಹಲವು ವರ್ಷಗಳಿಂದ ಬೇರೂರಿರುವ ಅಧಿಕಾರಿಗಳ ಎತ್ತಂಗಡಿಗೆ ಬಿಬಿಎಂಪಿ ಸಿದ್ಧತೆ

BBMP
Published on

ಬೆಂಗಳೂರು: ರಾಜಕೀಯ ಮತ್ತು ಹಣದ ಪ್ರಭಾವ ಬಳಸಿ ಹಲವು ವರ್ಷಗಳಿಂದ ಲಾಭದಾಯಕ ಹುದ್ದೆಯಲ್ಲಿ ಕುಳಿತಿರುವ, ಎರವಲು ಸೇವೆ ಮೇರೆಗೆ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವಣೆಗೆ ಬಿಬಿಎಂಪಿ ಸಿದ್ಧತೆ ನಡೆಸಿದೆ.

2023ರ ಮೇ 24ಕ್ಕೆ ರಾಜ್ಯ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದ್ದು, ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಚುನಾವಣೆ ಸಿದ್ಧತೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತವರು ಜಿಲ್ಲೆಯಲ್ಲಿ ಅಥವಾ ದೀರ್ಘಾವಧಿವರೆಗೆ ಸೇವೆ ಸಲ್ಲಿಸಿದ ಸ್ಥಳಗಳಿಂದ ಎತ್ತಂಗಡಿ ಮಾಡುವಂತೆ ಮತ್ತು ಬಡ್ತಿ ಹೆಸರಿನಲ್ಲಿ ತವರು ಜಿಲ್ಲೆಯಲ್ಲಿದ್ದರೆ ಕೂಡಲೇ ತೆಗೆಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ. ಹಾಗಾಗಿ, ಮೊದಲ ಹಂತದಲ್ಲಿ ಪಾಲಿಕೆಯ ಕಂದಾಯ ಇಲಾಖೆಯ ನೌಕರರನ್ನು ವರ್ಗಾವಣೆ ಮಾಡಲಾಲಾಗುತ್ತದೆ.

ಬಿಬಿಎಂಪಿಯಲ್ಲಿ ಗ್ರೂಪ್ ‘ಎ’, ‘ಬಿ’, ಮತ್ತು ‘ಸಿ’ ಸೇರಿ ಒಟ್ಟು 7,362 ಸಿಬ್ಬಂದಿ ಹಾಗೂ ಮಂಜೂರಾತಿಗಿಂತ ಹೆಚ್ಚುವರಿ 1,426 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಲಿಕೆಯ ಸಾಮಾನ್ಯ ಆಡಳಿತ ವಿಭಾಗದಲ್ಲಿ 2,314, ಲೆಕ್ಕಪತ್ರ ಇಲಾಖೆಯಲ್ಲಿ 79, ಲೆಕ್ಕಪರಿಶೋಧನಾ ಇಲಾಖೆಯಲ್ಲಿ 38, ಕೌನ್ಸಿಲ್ ಕಾರ್ಯಾಲಯದಲ್ಲಿ 09, ವಿದ್ಯಾ ಇಲಾಖೆಯಲ್ಲಿ 260, ಕಾಮಗಾರಿ ಇಲಾಖೆಯಲ್ಲಿ 2,882, ನಗರಯೋಜನೆ ವಿಭಾಗದಲ್ಲಿ 44, ಅರಣ್ಯ ವಿಭಾಗದಲ್ಲಿ 09, ಕಂದಾಯ ಇಲಾಖೆಯಲ್ಲಿ 660 ಮತ್ತು ತೋಟಗಾರಿಕೆ ವಿಭಾಗದಲ್ಲಿ 223 ಸಿಬ್ಬಂದಿ ವಿವಿಧ ವೃಂದದಲ್ಲಿ ಎಳೆಂಟು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಬಲವಾಗಿ ಬೇರೂರಿದ್ದಾರೆ.

ಚಿಲುಮೆ ಸಂಸ್ಥೆ ವಿರುದ್ಧ ಮತದಾರರ ದತ್ತಾಂಶ ಕಳವು ಪ್ರಕರಣ ಬೆಳಕಿಗೆ ಬಂದ ಬಳಿಕ ಚುನಾವಣಾ ಆಯೋಗ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆವಾಗುವ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಪಾಲಿಕೆ ಎಲ್ಲ ವ್ಯಾಪ್ತಿಯಲ್ಲಿ ಮೂರು ವರ್ಷಗಳಿಂದ ಒಂದೇ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಬಡ್ತಿಯಲ್ಲಿ ಇರುವ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗಾವಣೆಗೆ ಪಟ್ಟಿಯನ್ನು ಪಾಲಿಕೆ ಸಿದ್ಧಪಡಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net