

ಬೆಂಗಳೂರು: ಬಿಬಿಎಂಪಿ ಗುಣನಿಯಂತ್ರಣ ಪ್ರಯೋಗಾಲಯ ಕಚೇರಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತಕ್ಕೆ ಸಂಬಂಧ ಪಾಲಿಕೆ ಪ್ರಧಾನ ಅಭಿಯಂತರ ಪ್ರಹ್ಲಾದ್ ನೇತೃತ್ವದ ತಂಡವು ಬುಧವಾರ ಆಂತರಿಕ ವಿಚಾರಣೆ ತನಿಖೆ ಕೈಗೆತ್ತಿಗೊಂಡಿದೆ.
ಆ.31ರೊಳಗೆ ಘಟನೆ ಸಂಬಂಧ ತಾಂತ್ರಿಕ ವಿಚಾರಣೆ ವರದಿ ಸಲ್ಲಿಸುವಂತೆ ಆದೇಶ ಇರುವ ಹಿನ್ನೆಲೆಯಲ್ಲಿ ಬೆಂಕಿ ಅವಘಡ ನಡೆದು ಐದು ದಿನಗಳ ಬಳಿಕ ಆಂತರಿಕ ತನಿಖೆ ಕಾರ್ಯ ಆರಂಭವಾಗಿದೆ. ಬುಧವಾರ ಹಲಸೂರು ಗೇಟ್ ಪೊಲೀಸರ ಸಮ್ಮುಖದಲ್ಲಿ ಗುಣನಿಯಂತ್ರಣ ಪ್ರಯೋಗಾಲದ ಕಚೇರಿ ಬಾಗಿಲಿನ ಕೀ ತೆಗೆದು ಪ್ರಹ್ಲಾದ್ ತಂಡ, ಪರಿಶೀಲನೆ ನಡೆಸಿ ಅವಘಡಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಮಾಹಿತಿ ಕಲೆಹಾಕಿತು. ತಾಂತ್ರಿಕವಾಗಿ ಏನೆಲ್ಲ ಕೈಗೊಳ್ಳಬೇಕಿತ್ತು. ಸುರಕ್ಷತಾ ಕ್ರಮ ತೆಗೆದುಕೊಳ್ಳುವಲ್ಲಿ ಏನಾದರೂ ಲೋಪದೋಷಗಳು ಕಂಡು ಬಂದಿದೆಯಾ ಸೇರಿ ಇತರ ಮಜಲುಗಳಲ್ಲಿ ತನಿಖೆಯನ್ನು ಪ್ರಾರಂಭಿಸಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್, ಅವಘಡಕ್ಕೆ ತಾಂತ್ರಿಕವಾಗಿ ಏನೆಲ್ಲ ಕಾರಣವಾಗಿರಬಹುದು ಎಂಬ ಬಗ್ಗೆ ಪೂರಕ ಅಂಶಗಳನ್ನು ಕಲೆಹಾಕಲಾಗುತ್ತಿದೆ. ಪಾಲಿಕೆ ಮುಖ್ಯ ಆಯುಕ್ತರು ಮಾಸಾಂತ್ಯ ವೇಳಗೆ ತನಿಖೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.ಆ.25ರ ಒಳಗೆ ಘಟನೆಯ ಬಗ್ಗೆ ಸಂಪೂರ್ಣ ವರದಿ ನೀಡುವುದಾಗಿ ತಿಳಿಸಿದ್ದಾರೆ.
ಅವಘಡ ವೇಳೆ ಸ್ಥಳದಲ್ಲಿದ್ದ ಪಾಲಿಕೆ ಸಹಾಯಕ ಎಂಜಿನಿಯರ್ ಆನಂದ್ರಿಂದ ಘಟನೆಯ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕಲಾಗಿದೆ. ಖಾಸಗಿ ನುರಿತ ತಜ್ಞರುಗಳಿಂದಲೂ ಪ್ರಯೋಗಾಲಯದ ಕೊಠಡಿ, ಮೂಲಭೂತ ಸೌರ್ಯಗಳ ಲೋಪದೋಷಗಳ ಬಗ್ಗೆ ಹಾಗೂ ಈಗಿರುವ ಪ್ರಯೋಗಾಲದ ಸ್ಥಳವನ್ನು ಸ್ಥಳಾಂತರ ಮಾಡಬೇಕಾ ಎಂಬುದರ ಕುರಿತಂತೆ ಮಾಹಿತಿ ಕಲೆಹಾಕಲಾಗುತ್ತಿದೆ.ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಕಾಮಗಾರಿಗಳು ಮುಗಿದ ಮೇಲೆ ಡಾಂಬರೀಕರಣ ಮಾಡಲಾಗಿರುವ ರಸ್ತೆಯ ಸ್ಥಳದಿಂದ 500 ಗ್ರಾಂ ನಷ್ಟು ಸ್ಯಾಂಪಲ್ (ಮಾದರಿ ಪರೀಕ್ಷೆಗಾಗಿ) ತರಲಾಗುತ್ತಿದೆ. ಮೊದಲು ವಿದ್ಯುತ್ ಸ್ಟೌವ್ ಮೇಲೆ ಇಟ್ಟು ಆ ಸ್ಯಾಂಪಲ್ನ್ನು ಹೀಟ್ (ಬಿಸಿ) ಮಾಡಲಾಗುತ್ತದೆ. ಬಳಿಕ ಮೆಲ್ಟ್ (ಕರಗಿದ)ಆದ ಅಂಶವನ್ನು ಬೇರ್ಪಡೆ ಮಾಡಲು ಬೆಂಜಮಿನ್ ಎಂಬ ರಾಸಾಯಿನಿಕವನ್ನು ಪ್ರಯೋಗ ಮಾಡಲಾಗುತ್ತದೆ. ಆಗ ಅದು ಜಲ್ಲಿ, ಡಾಂಬರು ಸೇರಿದಂತೆ ಮತ್ತಿತರರ ಅಂಶಗಳನ್ನು ಬೇರ್ಪಡಿಸಲಿದೆ ಎಂದು ಮಾಹಿತಿ ನೀಡಿದರು. ಪ್ರಾಥಮಿಕ ಹಂತದ ಪ್ರಯೋಗ ನಡೆದ ನಂತರ ಮತ್ತೊಂದು ಬಾರಿ ಬೆಂಜಮಿನ್ ಹಾಕಿ ಗುಣಮಟ್ಟದ ಪರೀಕ್ಷೆ ನಡೆಸಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ರಸ್ತೆಯ ಗುಣಮಟ್ಟದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬಹುದಾಗಿ ಎಂದು ಪ್ರಹ್ಲಾದ್ ವಿವರಿಸಿದರು.
ಐವರು ಸಂಪೂರ್ಣ ಚೇತರಿಕೆ: ಬೆಂಕಿ ಅನಾಹುತದಿಂದ ಸುಟ್ಟಗಾಯದಿಂದ ಬಳಲುತ್ತಿದ್ದ ಬಿಬಿಎಂಪಿಯ 9 ಸಿಬ್ಬಂದಿಗಳ ಪೈಕಿ ಐವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮನೋಜ್, ಶ್ರೀನಿವಾಸ್, ಸಿರಾಜ್,ಶ್ರೀಧರ್ ಮತ್ತು ಸಂತೋಷ್ ಕುಮಾರ್ ಅವರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡುಬಂದಿದೆ. ಫ್ಯಾಸಿಯೊಟೊಮಿ ಶಸ್ತ್ರಾಚಿಕಿತ್ಸೆಗೆ ವಿಜಯಮಾಲ ಒಳಗಾದರೆ, ಕಿರಣ್ ಮತ್ತೊಮ್ಮೆ ಡಯಾಲಿಸಿಸ್ಗೆ ಒಳಗಾಗಿದ್ದಾರೆ. ಶೇ.28 ಸುಟ್ಟಗಾಯಗಳಿಂದ ಬಳಲುತ್ತಿರುವ ಡಿಟಿಪಿ ಆಪರೇಟರ್ ಜ್ಯೋತಿ ಮತ್ತು ಶೇ.25ರಷ್ಟು ಸುಟ್ಟಗಾಯಕ್ಕೆ ಒಳಗಾಗಿರುವ ಪಾಲಿಕೆ ಮುಖ್ಯ ಎಂಜಿನಿಯರ್ ಶಿವಕುಮಾರ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.