

ಬೆಂಗಳೂರು : ಬಿಬಿಎಂಪಿ ಕೌನ್ಸಿಲರ್ಗಳ ಸಂಖ್ಯೆಯನ್ನು 243ಕ್ಕೆ ನಿಗದಿ ಹಾಗೂ ವಾರ್ಡ್ಗಳ ಮರು ವಿಂಗಡಣಾ ಸಮಿತಿ ರಚಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
1976ರ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 7ನೇ ಪ್ರಕರಣದಡಿ ಬಿಬಿಎಂಪಿಗೆ ಕೌನ್ಸಿಲರ್ಗಳ ಸಂಖ್ಯೆ ಹೆಚ್ಚಿಸಲಾಗಿದೆ. ವಾರ್ಡ್ ಮರು ವಿಂಗಡಣೆಗೆ ಪಾಲಿಕೆ ಆಯುಕ್ತ, ಬೆಂ. ನಗರ ಜಿಲ್ಲಾಧಿಕಾರಿ, ಬಿಡಿಎ ಆಯುಕ್ತ ಹಾಗೂ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರು ಸೇರಿ 4 ಜನರನ್ನೊಳಗೊಂಡ ಸಮಿತಿ ರಚನೆ ಮಾಡಿ, ನಗರಾಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಕೆ.ಎ. ಹಿದಾಯತ್ ಉಲ್ಲಾ ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.
ಜನಗಣತಿ ನಡೆದರೆ ಚುನಾವಣೆ ಮುಂದಕ್ಕೆ: ಬಿಬಿಎಂಪಿ ವಾರ್ಡ್ಗಳನ್ನು ಕನಿಷ್ಠ 225ರಿಂದ ಗರಿಷ್ಠ 250 ಮೀರದಂತೆ ರಚಿಸಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಈಗ ಕೌನ್ಸಿಲರ್ಗಳ ಸಂಖ್ಯೆಯನ್ನು 243ಕ್ಕೆ ನಿಗದಿಯಾಗಿರುವುದರಿಂದ ಆ ಕಾರ್ಯಕ್ಕೆ ಸ್ಪಷ್ಟ ರೂಪ ಲಭಿಸಿದೆ. ವಾರ್ಡ್ಗಳ ಮರುವಿಂಗಡಣಾ ಸಮಿತಿಗೆ 6 ತಿಂಗಳ ಕಾಲಾವಕಾಶ ನೀಡಿದೆ. ಇದಾದ ನಂತರ ವಾರ್ಡ್ಗಳಿಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಲು ಕನಿಷ್ಠ 3 ತಿಂಗಳ ಕಾಲಾವಕಾಶ ಅಗತ್ಯವಿದೆ. ಇನ್ನೆರಡು ಕಳೆದರೆ 2021ರ ಜನಗಣತಿ ಆರಂಭವಾಗಲಿದೆ. ನಂತರ, ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಹೊಸ ಜನಗಣತಿ ಆಧರಿಸಿ ಚುನಾವಣೆ ನಡೆಸಬೇಕು ಎಂದು ಸರ್ಕಾರ ನಿರ್ಧರಿಸಿದರೆ ಚುನಾವಣೆ ಕನಿಷ್ಠ 1 ವರ್ಷ ಮುಂದೂಡಿಕೆಯಾಗುವ ಸಾಧ್ಯತೆಯಿದೆ.
ಹಣ ನೀರಲ್ಲಿ ಹೋಮ : ಬಿಬಿಎಂಪಿ ಸದಸ್ಯರ ಆಡಳಿತ ಸೆ.10ಕ್ಕೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಕೆಲವು ನಾಯಕರು ಚುನಾವಣೆ ವಿಳಂಬವಾಗುತ್ತಿರುವ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಚುನಾವಣೆ ವಿಳಂಬದ ಕುರಿತು ನ್ಯಾಯಾಲಯದ ಚಾಟಿಯಿಂದ ತಪ್ಪಿಸಿಕೊಳ್ಳಲು 198 ವಾರ್ಡ್ಗಳ ವಿಂಗಡಣೆ ಮಾಡಿತ್ತು. ನಂತರ, ವಾರ್ಡ್ಗಳ ಮೀಸಲಾತಿ ಪಟ್ಟಿಯನ್ನು ಕೂಡ ರಚಿಸಿತು. ಜತೆಗೆ, ರಾಜ್ಯ ಚುನಾವಣಾ ಆಯೋಗದಿಂದ ಜ.2020ರ ಆಧಾರಕ್ಕೆ ಅನುಗುಣವಾಗಿ ನ.30ರೊಳಗೆ ವಾರ್ಡ್ವಾರು ಮತದಾರರ ಪಟ್ಟಿ ರಚಿಸಿ ಅಂತಿಮ ಪಟ್ಟಿ ರಚನೆ ಮಾಡಲು ಮುಂದಾಗಿತ್ತು. ಈ ಕಾರ್ಯಗಳಿಗೆ ಸರ್ಕಾರದಿಂದ ವೆಚ್ಚ ಕೋಟ್ಯಂತರ ರೂ. ವೆಚ್ಚ ಮಾಡಲಾಗಿದ್ದು. ಈ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.
ವಾರ್ಡ್ ಪುನರ್ವಿಂಗಡಣಾ ಸಮಿತಿ: ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಹಾಗೂ ಬಿಡಿಎ ಆಯುಕ್ತ ಮಹದೇವ್ ಮತ್ತು ಬಿಬಿಎಂಪಿ ವಿಶೇಷ ಆಯುಕ್ತ ಎಸ್. ಬಸವರಾಜ್ ಸಮಿತಿಯ ಸದಸ್ಯರಾಗಿದ್ದಾರೆ.