ಕೈಮುಗಿದು ಕ್ಷಮೆ ಯಾಚಿಸಿದ ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್

BBMP Anilkumar
Published on

ಬೆಂಗಳೂರು: ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದೆ ಕರೊನಾ ಸೋಂಕಿತ ವ್ಯಕ್ತಿಯೊಬ್ಬರು ರಸ್ತೆಯಲ್ಲೇ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.

ಮೃತ ವ್ಯಕ್ತಿಯ ಮನೆ ಬಾಗಿಲಿಗೇ ಇಂದು ತೆರಳಿದ ಅನಿಲ್‌ಕುಮಾರ್, ಮೃತನ ಪತ್ನಿಗೆ ಕೈಮುಗಿದು ‘‘ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್ ಪೂರೈಸದೇ ಇದ್ದುದಕ್ಕಾಗಿ ವಿಷಾದವಿದೆ. ನಮ್ಮ ಸಿಬ್ಬಂದಿಯ ಕಡೆಯಿಂದ ನಡೆದ ಅಚಾತುರ್ಯಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ’’ ಎಂದು ಹೇಳಿದರು. ಇದನ್ನೂ ಓದಿ: ಹೊರಬಿತ್ತು ದೇಶಿಯವಾಗಿ ಸಿದ್ಧವಾಗಿರುವ 2ನೇ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದಿನ ಹೆಸರು

ಹನುಮಂತನಗರದ 55 ವರ್ಷದ ವ್ಯಕ್ತಿಯೊಬ್ಬರಿಗೆ ಕರೊನಾ ದೃಢಪಟ್ಟಿತ್ತು. ಆಸ್ಪತ್ರೆಗೆ ದಾಖಲಾಗುವುದಕ್ಕಾಗಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರು. ಮೂರು ಗಂಟೆಯಾದರೂ ಆಂಬ್ಯುಲೆನ್ಸ್ ಬರಲಿಲ್ಲ. ಕೊನೆಗೆ ಅವರೇ ಮನೆಯಿಂದ ಹೊರಬಂದು ನಡೆಯುತ್ತ ಹೋಗುತ್ತಿದ್ದಾಗ, ಸ್ವಲ್ಪ ದೂರದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದರು. ಅವರ ಕುಟುಂಬದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲೇ ಅವರ ಮೃತದೇಹವನ್ನು ಇಟ್ಟು ರೋದಿಸುತ್ತಿದ್ದ ದೃಶ್ಯ ಮತ್ತು ಹಲವು ಗಂಟೆಗಳ ಕಾಲ ಮಳೆಯಲ್ಲೇ ಆ ಶವ ಅನಾಥವಾಗಿ ಬಿದ್ದಿದ್ದ ವಿಡಿಯೋ ವೈರಲ್ ಆಗಿತ್ತು. ಇಡೀ ಆರೋಗ್ಯ ವ್ಯವಸ್ಥೆಯ ಬಗ್ಗೆ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net