

ಬೆಂಗಳೂರು: ಮಳೆ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಯಲಹಂಕ ವಲಯದ ಟಾಟಾನಗರದಲ್ಲಿ 2 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್,ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಯಲಹಂಕ ವಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ "ಮುಖ್ಯ ಆಯುಕ್ತರ ನಡೆ ವಲಯದ ಕಡೆ' ಕಾರ್ಯಕ್ರಮದಲ್ಲಿ ನಡೆದ ಸಭೆಯಲ್ಲಿ ಟಾಟಾ ನಗರದಲ್ಲಿ ಮಳೆಯಿಂದಾಗುವ ಅನಾಹುತ ತಪ್ಪಿಸಲು ಸಾರ್ವಜನಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯ ಆಯುಕ್ತರು, ಟಾಟಾನಗರಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ನಿರ್ಮಾಣಕ್ಕೆ ಟೆಂಡರ್ ಕರೆದು ಕಾಮಗಾರಿ ನಡೆಸಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆನರಾ ಬ್ಯಾಂಕ್ ಕಾಲನಿಯ ರಾಜಾರಾಂ ಮೋಹನರಾಯ್ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ರಸ್ತೆ ಉಬ್ಬು ತೆರವುಗೊಳಿಸಲು ಕೋರಿದ್ದ ಬಗ್ಗೆ ಪ್ರತಿಕ್ರಿಯಿಸಿ, ರಸ್ತೆ ಉಬ್ಬು ಮಾಡುವಾಗ ಪೊಲೀಸ್ ಅನುಮತಿ ಪಡೆಯಲಾಗಿರುತ್ತದೆ. ಆದರೂ, ಈ ಬಗ್ಗೆ ಸ್ಥಳ ಪರಿಶೀಲಿಸಿ ಅವೈಜಾನಿಕವಾಗಿ ನಿರ್ಮಾಣ ಮಾಡಿದ್ದರೆ ತೆರವುಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತುಷಾರ್ ಗಿರಿನಾಥ್, ಅಧಿಕಾರಿಗಳಿಗೆ ಸೂಚಿಸಿದರು. ನರಸೀಪುರ ಕೆರೆಯ ಬಫರ್ ಜೋನ್ನಲ್ಲಿ ಅನಧಿಕೃತವಾಗಿ 4 ಅಂತಸ್ತಿನ ಕಟ್ಟಡ ನಿರ್ಮಾಣ ಕುರಿತು ಪರಿಶೀಲಿಸಬೇಕು ಎಂದರು. ಜಕ್ಕೂರು,ಥಣಿಸಂದ್ರ ಮುಖ್ಯ ರಸ್ತೆಯ ಅಂಗಡಿ ಮುಂಗಟ್ಟುಗಳು ಶೇ.60 ಕನ್ನಡ ಭಾಷೆಯ ನಾಮಫಲಕ ಅಳವಡಿಸಿದ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಹೇಳಿದರು. ವಲಯ ಆಯುಕ್ತ ಕರೀಗೌಡ, ಪಾಲಿಕೆಯ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತ ರಂಗನಾಥ್, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರ,ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಮುಖ ಅಹವಾಲುಗಳು:
ಶಿವನಹಳ್ಳಿ ಕೆರೆ ಬಳಿ ಪಾದಚಾರಿ ಮಾರ್ಗ ಒತ್ತುವರಿ ತೆರವು, ರಾಮಚಂದ್ರಪುರ ಮುಖ್ಯರಸ್ತೆಯಲ್ಲಿ ರಸ್ತೆ ಅಗಲೀಕರಣ ಪೂರ್ಣಗೊಳಿಸುವುದು, ನರಸೀಪುರ ಬಡಾವಣೆಯಲ್ಲಿ ಡೆನ್ ಬ್ಲಾಕ್ ತೆರವು, ಭುವನೇಶ್ವರಿ ನಗರದಲ್ಲಿ ಮನೆ,ಮನೆ ಕಸ ಸಂಗ್ರಹಿಸುವುದನ್ನು ಸಮರ್ಪಕವಾಗಿ ನಿರ್ವಹಿಸದಿರುವುದು, ಟಾಟಾ ನಗರದಲ್ಲಿ ರಾಜಕಾಲುವೆ ಮೇಲೆ ಅಳವಡಿಸಿದ ಸ್ಲ್ಯಾಬ್ ತೆರವುಗೊಳಿಸಿ ಹೂಳೆತ್ತುವುದು, ದೊಡ್ಡಬೆಟ್ಟಹಳ್ಳಿಯಲ್ಲಿ ಕುಡಿಯುವ ನೀರು ಸಮಸ್ಯೆ ಬಗೆಹರಿಸುವುದು, ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಯಂತ್ರಿಸುವುದು, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ತಡೆಯುವುದು. ತಿಂಡ್ಲು ಬಳಿ ಬಿಡಾಡಿ ದನಗಳ ಸಮಸ್ಯೆ ನಿವಾರಣೆಗೊಳಿಸುವುದು, ಜಿಕೆವಿಕೆ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿ ಶೆಡ್ ಮತ್ತು ನರಸೀಪುರ 5ನೇ ಕ್ರಾಸ್ನಲ್ಲಿ ಚರಂಡಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ತೆರವು ಸೇರಿ ಇತರೆ ಪ್ರಮುಖ ಅಹವಾಲುಗಳು ಸ್ವೀಕಾರವಾದವು.
ಕಳೆದ ಬಾರಿ ನಾಗರಿಕರಿಂದ ಬಂದಿದ್ದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇದೀಗ ಸಾರ್ವಜನಿಕರಿಂದ ಸ್ವೀಕಾರವಾದ 35 ದೂರುಗಳನ್ನು ಶ್ರೀದಲ್ಲೇ ಬಗೆಹರಿಸಲಾಗುವುದು.
| ತುಷಾರ್ ಗಿರಿನಾಥ್. ಬಿಬಿಎಂಪಿ ಮುಖ್ಯ ಆಯುಕ್ತ.