ಹಣದ ಆಮಿಷಕ್ಕೆ ಒಳಗಾಗದೆ ಮತ್ತೊಮ್ಮೆ ಅವಕಾಶ ಕೊಡಿ: ಸಿ.ಎಸ್​.ಷಡಾಕ್ಷರಿ ಮನವಿ

shadakshari
Published on

ಬೆಂಗಳೂರು: ಈ ಬಾರಿ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ರಾಜಕೀಯ ನಾಯಕರು ಎದುರಾಳಿಯ ಜತೆ ಕೈಜೋಡಿಸಿ ನನ್ನನ್ನು ಸೋಲಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ಸಿ.ಎಸ್​.ಷಡಾಕ್ಷರಿ ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸೇರಿ ಸಂಘದ ವಿವಿಧ ಪದಾಧಿಕಾರಿಗಳ ಆಯ್ಕೆಗೆ ಶುಕ್ರವಾರ(ಡಿ.27) ಬೆಂಗಳೂರಿನ ಕಬ್ಬನ್​ಪಾರ್ಕ್​ ಆವರಣದಲ್ಲಿರುವ ನೌಕರರ ಸಂಘದಲ್ಲಿ ಚುನಾವಣೆ ನಡೆಯಲಿದೆ. ಹಣ, ತೋಳ್ಬಲ ಸೇರಿ ಎಲ್ಲ ಬಲವನ್ನು ಎದುರಾಳಿಯವರು ಪ್ರಯೋಗಿಸುತ್ತಿದ್ದಾರೆ. ಇದಕ್ಕೆ ರಾಜಕೀಯ ನಾಯಕರೂ ಸಾಥ್​ ನೀಡುತ್ತಿದ್ದಾರೆ. ಹಣ ಸೇರಿ ಇತರೆ ಆಮಿಷಕ್ಕೆ ಒಳಗಾಗದೆ ಸೇವಾಬಲದಿಂದ ಕಾರ್ಯನಿರ್ವಹಿಸುತ್ತಿರುವ ನನಗೆ ಮತ್ತೊಮ್ಮೆ ಅವಕಾಶ ನೀಡುವಂತೆ ಮತದಾರರಿಗೆ ಮನವಿ ಮಾಡಿದರು.

5.25 ಲಕ್ಷ ಸರ್ಕಾರಿ ನೌಕರರನ್ನು ಹೊಂದಿರುವ ಬೃಹತ್​ ಸಂಘ ಇದಾಗಿದ್ದು, ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುತ್ತಿದ್ದ ನಮ್ಮ ಸಂಘಕ್ಕೆ ಈ ಬಾರಿ ರಾಜಕೀಯ ವ್ಯಕ್ತಿಗಳು ಪ್ರವೇಶಿಸಿರುವುದು ಬೇಸರದ ಸಂಗತಿ.ಬೆಂಗಳೂರು ನಗರ ಜಿಲ್ಲೆಯ 102 ರಾಜ್ಯ ಪರಿಷತ್​ ಸದಸ್ಯರು, ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ, ಜಿಲ್ಲಾ ರಾಜ್ಯ ಪರಿಷತ್ತು ಸದಸ್ಯರು, ಜಿಲ್ಲಾ ಕಾರ್ಯದರ್ಶಿ, ತಾಲೂಕು ಶಾಖೆಯ ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್ತು ಸದಸ್ಯರು, ಕಾರ್ಯದರ್ಶಿ ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರು ಸೇರಿ 971 ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಇವರೆಲ್ಲರೂ ನನ್ನನ್ನು ಬೆಂಬಲಿಸುವ ವಿಶ್ವಾಸ ನನಗಿದೆ ಎಂದರು.

ಹಲವು ಭರವಸೆ ಈಡೇರಿಕೆ: ಕಳೆದ ಬಾರಿ ಎಲ್ಲರ ಸಹಕಾರದಿಂದ ಅಭೂತಪೂರ್ವ ಜಯಸಾಧಿಸಿ ಮೊದಲ ಬಾರಿ ಸಂಘದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶೇ.90ರಷ್ಟು ಭರವಸೆಗಳನ್ನು ಈಡೇರಿಸುವ ಮೂಲಕ ನೌಕರರ ಕಣ್ಣೀರು ಒರೆಸುವ ಕೆಲಸ ಮಾಡಿದ್ದೇನೆ. ಸರ್ಕಾರದ ಮಟ್ಟದಲ್ಲಿ ಹೋರಾಡಿ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ ಎಂದು ಷಡಾಕ್ಷರಿ ಹೇಳಿದರು. 25-30 ವರ್ಷದಿಂದ ಸಂಘಟನೆಯಲ್ಲಿ ತೊಡಗಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಮತ್ತೊಮ್ಮೆ ಅಧ್ಯಕ್ಷನ್ನಾಗಿ ಆಯ್ಕೆಯಾದರೆ ನೌಕರರಿಗೆ ಕೇಂದ್ರ ಮಾದರಿ ವೇತನ, ಎನ್​ಪಿಎಸ್​ ರದ್ದು, ಆರೋಗ್ಯ ಯೋಜನೆ ಜಾರಿ, ಹೈದರಾಬಾದ್​-ಕರ್ನಾಟಕ ಭಾಗದ ನೌಕರರಿಗೆ ಮುಂಬಡ್ತಿಗಾಗಿ 371ಜೆ ವಿಶೇಷ ಸ್ಥಾನಮಾನ, ಎಲ್ಲ ಇಲಾಖೆಗಳಲ್ಲಿರುವ "ಎ', "ಬಿ', "ಸಿ' ಮತ್ತು "ಡಿ' ವೃಂದದ ನೌಕರರನ್ನು ಕೌನ್ಸೆಲಿಂಗ್​ ಮೂಲಕ ವರ್ಗಾವಣೆ ಕಾಯ್ದೆ ತರುವುದೂ ಸೇರಿ ಹಲವು ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net