

ಚಿತ್ರದುರ್ಗ: ಮುಖ್ಯಮಂತ್ರಿಯವರು ಆರ್ಎಸ್ಎಸ್ ಹಿಡಿತದಲ್ಲಿ ಇದ್ದಾರೆ ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದು, ಆ ಕುರಿತು ತಮಗೆ ಬೇಸರವಿಲ್ಲ ಎಂದು ಹೇಳುವ ಮೂಲಕ ಸಮರ್ಥನೆಯನ್ನೂ ಮಾಡಿಕೊಂಡಿದ್ದಾರೆ.
ಸಿಎಂ ಬೊಮ್ಮಾಯಿ ಅವರು ಆರ್ಎಸ್ಎಸ್ನ ರಿಮೋಟ್ ಕಂಟ್ರೋಲ್ನಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಟೀಕೆಗೆ ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಆರ್ಎಸ್ಎಸ್ ಹಿಡಿತದಲ್ಲಿ ಇರುವುದಕ್ಕೆ ನನಗೆ ಬೇಸರವಿಲ್ಲ. ಆರ್ಎಸ್ಎಸ್ ರಾಷ್ಟ್ರ ಕಟ್ಟುವ ಕೆಲಸವನ್ನು ಮಾಡುತ್ತಿದೆ. ನಾನು ರಾಷ್ಟ್ರ ಕಟ್ಟುವ ಕೆಲಸ ಮಾಡುವ ಸಂಘಟನೆಯ ಹಿಡಿತದಲ್ಲಿದ್ದೇನೆ ಅಂತ ಅವರು ಅಂದುಕೊಳ್ಳಲಿ. ನಾನು ಸಮರ್ಪಣಾ ಭಾವದಿಂದ ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಿದ್ದೇನೆ ಸಿಎಂ, ಸಿದ್ದರಾಮಯ್ಯ ಅವರ ಕುರಿತು ಪ್ರತಿಟೀಕೆಯನ್ನೂ ಮಾಡಿದ್ದಾರೆ.
ಸಮಾಜವಾದಿ ಪಕ್ಷದಿಂದ ಬಂದಿರುವ ಸಿದ್ದರಾಮಯ್ಯ ಅವರು ಒಂದು ಕುಟುಂಬದ ಹಿಡಿತದಲ್ಲಿ ಇರುವುದಕ್ಕೆ ನನಗೆ ಬಹಳ ಬೇಸರವಿದೆ ಎಂದು ಹೇಳಿದ ಸಿಎಂ, ಉಳಿದ ಪ್ರಶ್ನೆಗಳಿಗೆ ಉತ್ತರಿಸದೆ ತೆರಳಿದರು.