ತ್ಯಾಜ್ಯ ಘಟಕಕ್ಕೆ ವಿರೋಧ : ಡಿಸಿ ದಿಢೀರ್ ಭೇಟಿಯ ಬಗ್ಗೆ ಪ್ರಶ್ನೆ

New Project (24)
Published on

ಬಂಟ್ವಾಳ: ಕಂಚಿನಡ್ಕ ಪದವಿನಲ್ಲಿರುವ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಪರಿಸರವಾಸಿಗಳು ಅನಗತ್ಯ ಖ್ಯಾತೆ ತೆಗೆದು ಪ್ರತಿಭಟನೆ ನಡೆಸುತ್ತಿದ್ದಾರಾ? ಇದರ ಹಿಂದಿರುವ ಉದ್ದೇಶವಾದರೂ ಏನು? ಅದಕ್ಕೊಂದು ಅಂತ್ಯ ಅಥವಾ ಸಮಸ್ಯೆಗೆ ಪರಿಹಾರ ಎಂಬುದೇ ಇಲ್ಲವೇ? ಜಿಲ್ಲಾಧಿಕಾರಿ ಎರಡು ದಿನಗಳ ಹಿಂದೆ ಘಟಕದ ಪರಿಶೀಲನೆ ಯಾಕಾಗಿ ಬಂದಿದ್ದಾರೆ? ಎಂದು ಗುರುವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.

ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮೊನೀಶ್ ಆಲಿ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಶರೀಫ್ ಈ ವಿಷಯ ಪ್ರಸ್ತಾವಿಸಿ ಜಿಲ್ಲಾಧಿಕಾರಿ ಘಟಕಕ್ಕೆ ಭೇಟಿಯ ವೇಳೆ ಅಧ್ಯಕ್ಷರ ಗಮನಕ್ಕೂ ತಾರದಿರುವುದು ಸಮಂಜಸವಲ್ಲ, ಪುರಸಭೆಯಲ್ಲಿ ಆಡಳಿತ ಸಮಿತಿಯೊಂದು ಇದೆ ಎಂಬುದು ಅವರಿಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದರು. ಘಟಕದ ಸುತ್ತಮುತ್ತ ಇರುವ ಮನೆಗಳು ಅನಧಿಕೃತವಾಗಿದ್ದು, ಘಟಕ ವೈಜ್ಞಾನಿಕವಾಗಿ ಕಾರ್ಯಾಚರಿಸುತ್ತಿದ್ದರೂ ಸ್ಥಳೀಯರು ಉದ್ದೇಶಪೂರ್ವಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಜಿಲ್ಲಾಧಿಕಾರಿ ಹಠಾತ್ ಭೇಟಿ ನೀಡಿದ್ದು, ನಮಗೂ ಅದೇ ದಿನ ಬೆಳಗ್ಗೆ ಮಾಹಿತಿ ಬಂದಿತ್ತು. ನಾವು ಸ್ಥಳಕ್ಕೆ ತಲುಪುವಷ್ಟರಲ್ಲಿ ಜಿಲ್ಲಾಧಿಕಾರಿ ಸ್ಥಳದಲ್ಲಿದ್ದರು. ಘಟಕದಲ್ಲಾಗುತ್ತಿರುವ ಗೊಬ್ಬರ ಸಹಿತ ನಿರ್ವಹಣೆಯ ಬಗ್ಗೆ ಜಿಲ್ಲಾಧಿಕಾರಿ ತೃಪ್ತಿಪಟ್ಟಿದ್ದಾರೆ. ತ್ಯಾಜ್ಯ ವಿಲೇವಾರಿ ಬಗ್ಗೆ ಒಂದಷ್ಟು ಸಲಹೆ, ಸೂಚನೆ ನೀಡಿದ್ದಾಗಿ ತಿಳಿಸಿದರು.

ಮಲಿನ ನೀರು ನೇತ್ರಾವತಿಗೆ

ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಯ ಕಾಮಗಾರಿ ಕಳೆದ 13 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪರಿಣಾಮವಾಗಿ ಬಸ್ತಿಪಡ್ಪು ಬಳಿರುವ ಕಿರು ಸೇತುವೆ, ಕೈಕುಂಜ, ಗೂಡಿನಬಳಿ, ಬಂಟ್ವಾಳ ಸಹಿತ ಕೆಲವೆಡೆಯಲ್ಲಿ ಚರಂಡಿಯ ಮಲಿನ ನೀರು ನೇರವಾಗಿ ನೇತ್ರಾವತಿಯ ಒಡಲು ಸೇರುತ್ತಿದೆ. ಇದೇ ಕೊಳಚೆ ನೀರನ್ನು ಮಂಗಳೂರಿನ ಜನತೆ ಕುಡಿಯುತ್ತಿದ್ದಾರೆ ಎಂದು ಸದಸ್ಯ ಗೋವಿಂದಪ್ರಭು ಆಕ್ರೋಶ ವ್ಯಕ್ತಪಡಿಸಿದರು.

ಪಾಣೆಮಂಗಳೂರು ಮಟನ್ ಸ್ಟಾಲ್ ವಿಚಾರದಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಪರವಿರೋಧದ ಚರ್ಚೆ ನಡೆದು ತಾರಕ್ಕಕೇರಿತು.

ಸದಸ್ಯರಾದ ಇದ್ರೀಸ್, ಝೀನತ್, ರಾಮಕೃಷ್ಣ ಆಳ್ವ, ಶಶಿಕಲಾ, ದೇವಕಿ, ಮೀನಾಕ್ಷಿಗೌಡ, ಗಾಯತ್ರಿ ಮೊದಲಾದ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಜಮೀನು ಅನ್ಯರಪಾಲು

ಪಾಣೆಮಂಗಳೂರಿನ ಬಂಗ್ಲೆಗುಡ್ಡೆ, ಉಪ್ಪುಗುಡ್ಡೆ ಸಹಿತ ಹಲವೆಡೆ ಪುರಸಭೆ ಜಾಗ ಅನ್ಯರ ಪಾಲಾಗುತ್ತಿದ್ದು, ಅಲ್ಲಿ ರಾಜಾರೋಷವಾಗಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಗಮನ ಸೆಳೆದರು. ಅಲ್ಲಿರುವ ವಿ.ಎ.ಕಚೇರಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಕುಸಿದು ಬೀಳುವ ಹಂತದಲ್ಲಿದೆ ಎಂದು ಸದಸ್ಯ ಸಿದ್ಧೀಕ್ ಗುಡ್ಡೆಯಂಗಡಿ ಸಭೆಗೆ ತಿಳಿಸಿ ಉಳಿಕೆ ಜಾಗವನ್ನಾದರೂ ಪುರಸಭೆಯ ಹೆಸರಿನಲ್ಲಿ ಮಾಡಿಸಿಕೊಂಡು ರಕ್ಷಿಸುವಂತೆ ಸಲಹೆ ನೀಡಿದರು.

ಅನಧಿಕೃತ ಗೂಡಂಗಡಿ ತೆರವು

ಬಿ.ಸಿ.ರೋಡು ಸುತ್ತಮುತ್ತ ಫುಟ್‌ಪಾತ್ ಅತಿಕ್ರಮಿಸಿರುವ ಅನಧಿಕೃತ ಫಾಸ್ಟ್‌ಪುಡ್, ಮೇಲ್ಸೇತುವೆಯಡಿ, ಸುತ್ತಮುತ್ತ ಇರುವ ಎಲ್ಲ ಬೀದಿಬದಿ ವ್ಯಾಪಾರಿಗಳನ್ನು ಪೊಲೀಸರ ಸಹಕಾರ ಪಡೆದು ತೆರವುಗೊಳಿಸುವುದೆಂದು ನಿರ್ಣಯಿಸಲಾಯಿತು.

ಎಮ್ಮೆ ಮಾಂಸ ಮಾರಾಟಕ್ಕಿಲ್ಲ ಅನುಮತಿ

ಮಂಗಳೂರಿನ ವ್ಯಕ್ತಿಯೋರ್ವರು ಬಿ.ಮೂಡಗ್ರಾಮದಲ್ಲಿ ಎಮ್ಮೆ ಮಾಂಸ ಮಾರಾಟ ಉದ್ಯಮ ನಡೆಸಲು ಪರವಾನಗಿ ಕೋರಿ ಸಲ್ಲಿಸಿದ ಅರ್ಜಿಯ ಬಗ್ಗೆ ಸಭೆಯಲ್ಲಿ ಸ್ವಾರಸ್ಯಕರ ಚರ್ಚೆನಡೆಯಿತು. ಜಿಲ್ಲೆಯಲ್ಲಿ ಈಗ ಎಮ್ಮೆಯೇ ಕಾಣಲು ಸಿಗುತ್ತಿಲ್ಲ ಇನ್ನೆಲ್ಲಿಂದ ಮಾಂಸ ತಂದು ಮಾರಾಟ ಮಾಡುತ್ತಾರೆ ಎಂದು ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿ ರತ್ನಪ್ರಸಾದ್ ಹಾವೇರಿ ಜಿಲ್ಲೆಯಲ್ಲಿ ಅವರು ಎಮ್ಮೆ ಮಾಂಸದ ಉದ್ಯಮ ಹೊಂದಿದ್ದು, ಅಲ್ಲಿಂದ ತಂದು ಮಾರಾಟ ಮಾಡುವ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂದರು. ಈಗಾಗಲೇ ರಾಜಸ್ಥಾನದಿಂದ ಮಾಂಸದ ಪ್ಯಾಕೆಟ್ ತಂದು ಬೆಂಗಳೂರಿನಲ್ಲಿ ರಾದ್ಧಾಂತವಾದ ಬಗ್ಗೆ ನಮ್ಮ ಕಣ್ಣೆದುರಿಗೇ ಇದೆ. ಇನ್ನು ಈತ ಎಮ್ಮೆ ಎಂದು ಹೇಳಿ ಇನ್ಯಾವುದೋ ಮಾಂಸ ತಂದು ಮಾರಾಟ ಮಾಡಿ ಶಾಂತವಾಗಿರುವ ಬಂಟ್ವಾಳವನ್ನು ಹದಗೆಡಿಸುವುದು ಬೇಡ ಎಂದು ಪ್ರಭು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net