ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಹೆಮ್ಮೆ : ಪೂರಣ್ ವರ್ಮ ಸಂತಸ

New Project (22)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

2024-25 ಬೆಳ್ತಂಗಡಿ ರೋಟರಿ ಕ್ಲಬ್ ಪಾಲಿಗೆ ಯಶಸ್ವಿ ವರ್ಷ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕ್ಲಬ್‌ನ ಗೌರವ ಸದಸ್ಯರಾಗಿರುವ ಹೆಮ್ಮೆಯೊಂದಿಗೆ, ಈ ಬಾರಿಯೂ ಅನೇಕ ಜನಪರ ಯೋಜನೆಗಳನ್ನು ಬೆಳ್ತಂಗಡಿ ರೋಟರಿ ಕ್ಲಬ್ ಮೂಲಕ ಜಾರಿಗೊಳಿಸಲಾಗಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳ್ತಂಗಡಿ ರೋಟರಿ ಕ್ಲಬ್‌ನ 122 ರೊಟೇರಿಯನ್‌ಗಳು ಲಕ್ಷದ್ವೀಪಕ್ಕೆ ಪಯಣಿಸುವುದರೊಂದಿಗೆ ಸ್ನೇಹ-ಬಾಂಧವ್ಯ ವೃದ್ಧಿಸುವ ಈ ಪರ್ವಕ್ಕೆ ನಾಂದಿ ಹಾಡಲಾಗಿತ್ತು. ವೀಕ್ಲಿ ಮೀಟಿಂಗ್ ಕೂಡಾ ಅಲ್ಲೇ ನಡೆದಿದ್ದು ವಿಶೇಷ ಎಂದರು.

ಜು.4ರಂದು 54ನೇ ಅಧ್ಯಕ್ಷ ಮತ್ತು ಕಾರ್ಯದರ್ಶಿ, ಪದಾಧಿಕಾರಿಗಳ ಪದಗ್ರಹಣದೊಂದಿಗೆ ಪ್ರಸಕ್ತ ಸಾಲಿನಲ್ಲಿ ಸಂಘದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. 25ಕ್ಕೂ ಹೆಚ್ಚು ವಾರದ ಸಭೆಗಳು ಮತ್ತು 3 ಮಂಡಳಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸದಸ್ಯರ ಜ್ಞಾನ ವೃದ್ಧಿ ಮಾಡಲಾಗಿದೆ. ಜಾಯಿಂಟ್ ಮೀಟಿಂಗ್, ಫ್ಲ್ಯಾಗ್ ಎಕ್ಸ್-ಚೇಂಜ್ ಮೀಟಿಂಗ್‌ಗಳ ಜತೆಗೆ ಫನೋಥಾನ್ ಅನ್ನುವ ವಿಶಿಷ್ಟ ಪರಿಕಲ್ಪನೆಯಡಿಯಲ್ಲಿ ಸಭೆ ನಡೆಸಲಾಗಿದೆ. ರಕ್ಷಾಬಂಧನ, ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಆಚರಣೆಗಳೂ ನಡೆದಿವೆ. ರೊಟೇರಿಯನ್‌ಗಳ ಮಕ್ಕಳ ನಡುವೆ ಸ್ನೇಹ-ಬಾಂಧವ್ಯ ವೃದ್ಧಿಗೆ ಕಾರಣವಾದ ಬ್ರಿಂಗ್ ಯುವರ್ ಕಿಡ್ ಯೋಜನೆ ಯಶಸ್ವಿಯಾದ ಖುಷಿ ನಮ್ಮದು ಎಂದರು.

100ಕ್ಕೂ ಹೆಚ್ಚು ಸಮುದಾಯ ಸೇವಾ ಕಾರ್ಯಕ್ರಮ ನಡೆಸಲಾಗಿದೆ. ರಕ್ತದಾನ ಶಿಬಿರಗಳ ಮೂಲಕ 850ಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ಜತೆಗೆ ಜೀವರಕ್ಷಕ್ ಕಾರ್ಯಕ್ರಮದ ಮೂಲಕ ಅಗತ್ಯ ಸಂದರ್ಭ ರಕ್ತದ ಅವಶ್ಯಕತೆಯಿದ್ದ ರೋಗಿಗಳಿಗೆ ರಕ್ತ ಒದಗಿಸಿಕೊಡಲಾಗಿದೆ. ವಿದ್ಯಾರ್ಥಿಗಳಿಗೆ 25.5 ಲಕ್ಷ ರೂ. ಮೌಲ್ಯದ ಸ್ಕಾಲರ್‌ಷಿಪ್ ನೀಡಲಾಗಿದೆ. ಕಂಪ್ಯೂಟರ್ ವಿತರಣೆ, ಉಚಿತ ಆರೋಗ್ಯ ಶಿಬಿರ ಹಾಗೂ ಯುವಜನರಲ್ಲಿ ಕೃಷಿ ಪ್ರೀತಿಯನ್ನು ಉತ್ತೇಜಿಸುವ ವಿಶಿಷ್ಟ ಯುವಸಿರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಲನಿಧಿ, ಕೃಷಿ ನಿಧಿ ಕಾರ್ಯಕ್ರಮಗಳೂ ನಡೆಸಲಾಗಿದೆ. 650ಕ್ಕೂ ಅಧಿಕ ಸಸಿ ವಿತರಣೆ ಮಾಡಲಾಗಿದೆ. ಯಶೋ ಯಕ್ಷನಮನದ ಮೂಲಕ ಈ ಭಾಗದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಂಭ್ರಮಿಸಲಾಗಿದೆ. ಜತೆಗೆ ವಿವಿಧ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡಲಾಗಿದೆ ಎಂದರು.

ಈ ಎಲ್ಲ ಸಾಧನೆಗಳ ಹಿಂದೆ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತಾ, ಅಸಿಸ್ಟೆಂಟ್ ಗವರ್ನರ್ ಮೊಹಮ್ಮದ್ ವೊಳವೂರು, ವಲಯ ಸೇನಾನಿ ಮನೋರಮಾ ಭಟ್ ಮಾರ್ಗದರ್ಶನವಿದ್ದು, ಜತೆಗೆ ಬೆಳ್ತಂಗಡಿ ರೋಟರಿ ಕ್ಲಬ್‌ನ ಸರ್ವಸದಸ್ಯರೂ ಕೈಜೋಡಿಸಿದ್ದು, ಇನ್ನು ಮುಂದಿನ ಅವಧಿಯಲ್ಲೂ ಇದೇ ಸಹಕಾರವನ್ನು ನಿರೀಕ್ಷಿಸುತ್ತೇನೆ ಎಂದರು.

ಜಿಲ್ಲಾ ಗವರ್ನರ್ ವಿಕ್ರಂ ದತ್ತಾ, ಅಸಿಸ್ಟೆಂಟ್ ಗವರ್ನರ್ ಮೊಹಮ್ಮದ್ ವೊಳವೂರು, ವಲಯ ಸೇನಾನಿ ಮನೋರಮಾ ಭಟ್, ಕಾರ್ಯದರ್ಶಿ ಸಂದೇಶ್, ನಿಯೋಜಿತ ಅಧ್ಯಕ್ಷ ಪ್ರಕಾಶ್ ಪ್ರಭು, ಕಾರ್ಯದರ್ಶಿ ಡಾ.ಎಂ.ಎಂ.ದಯಾಕರ್ ಉಪಸ್ಥಿತರಿದ್ದರು. ಬೆಳ್ತಂಗಡಿ ರೋಟರಿ ಕ್ಲಬ್ ಟ್ರಸ್ಟ್‌ಗೆ ರೋಟರಿ ಸಂಸ್ಥೆಯಿಂದ ಚೇರ್ ಹಸ್ತಾಂತರಿಸಲಾಯಿತು.

ಯುವ ಜನಾಂಗಕ್ಕೆ ಪ್ರೇರಣೆ

ವೋಕೇಶನಲ್ ಸರ್ವಿಸ್ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ನೆರವಾಗುವಂತೆ ನಾಯಕತ್ವ ತರಬೇತಿ, ಕೌಶಲಾಭಿವೃದ್ಧಿ, ಕೋಚಿಂಗ್ ಮೊದಲಾದ ಸೇವೆ ನೀಡಲಾಗಿದೆ. ಡಿವೈಎಸ್ಪಿ ಮಂಜುನಾಥ್ ಅವರ ಮೂಲಕ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಮಹಿಳೆಯರ ಆರೋಗ್ಯ ಜಾಗೃತಿ ಮತ್ತು ನೈರ್ಮಲ್ಯ ಕಾರ್ಯಕ್ರಮ ನಡೆಸಲಾಗಿದೆ .ಯೂತ್ ಸರ್ವಿಸ್‌ನಡಿಯಲ್ಲಿ ವಿಶಿಷ್ಟ ಕಾರ್ಯಕ್ರಮ ನಡೆದಿವೆ. ಇನ್‌ಸ್ಪೈರ್ ಸಿರೀಸ್ ಅನ್ನುವ ಸರಣಿ ಕಾರ್ಯಕ್ರಮಗಳ ಮೂಲಕ ವಿವಿಧ ಕ್ಷೇತ್ರಗಳ ಸಾಧಕರ ಜತೆ ವಿದ್ಯಾರ್ಥಿಗಳ ಸಂವಾದ ಏರ್ಪಡಿಸಿ ಆ ಮೂಲಕ ಯುವಜನಾಂಗಕ್ಕೆ ಪ್ರೇರಣೆ ನೀಡಲಾಗಿದೆ.

ವಿದ್ಯಾರ್ಥಿಗಳ ಸಾಂಸ್ಕೃತಿಕ ವಿನಿಮಯ

ಈ ವರ್ಷದ ವಿಶೇಷತೆ ಅನ್ನುವ ಹಾಗೆ ಜಿಲ್ಲಾ ಇಂಟರಾಕ್ಟ್ ಕಾನ್ಫರೆನ್ಸ್ ಆಯೋಜಿಸುವ ಸುವರ್ಣಾವಕಾಶ ನಮ್ಮ ಪಾಲಿಗೆ ಒದಗಿ ಬಂದಿತ್ತು. ಇದರಂಗವಾಗಿ ನಡೆಸಿದ ಯೂತ್ ಕಾರ್ನಿವಾಲ್‌ಗೆ ಅಭೂತಪೂರ್ವ ಸ್ಪಂದನೆ ದೊರೆತಿದೆ. ಇಂಟರ್‌ನ್ಯಾಷನಲ್ ಸರ್ವಿಸ್‌ನಡಿಯಲ್ಲಿ ಪೋಲಿಯೋ ಫಂಡ್‌ಗೆ ಎಲ್ಲ ಸದಸ್ಯರು ದೇಣಿಗೆ ನೀಡುವುದರ ಜತೆಗೆ ಜಾಗೃತಿ ಮೂಡಿಸಲಾಗಿದೆ. ಕಾಂಬೋಡಿಯಾ ಮತ್ತು ಜಪಾನ್ ವಿದ್ಯಾರ್ಥಿಗಳ ಜತೆಗೆ ಸಾಂಸ್ಕೃತಿಕ ವಿನಿಮಯ ನಡೆಸಲಾಗಿದೆ ಎಂದರು.

ಉಚಿತ ಡಯಾಲಿಸಿಸ್‌ಗೆ ಅಭಿನಂದನೆ

ಪಬ್ಲಿಕ್ ಇಮೇಜ್ ಬಿಲ್ಡಿಂಗ್ ಪ್ರಯುಕ್ತ ರಾಜ್ಯದ ವಿವಿಧ ಪತ್ರಿಕೆಗಳು, ಟಿ.ವಿ. ವಾಹಿನಿಗಳು ಹಾಗೂ ನ್ಯೂಸ್ ವೆಬ್ಸೈಟ್‌ಗಳಲ್ಲಿ 200ಕ್ಕೂ ಅಧಿಕ ಕಾರ್ಯಕ್ರಮಗಳ ಕುರಿತು ಮಾಹಿತಿ, ಸಚಿತ್ರ ವರದಿಗಳು ಪ್ರಕಟವಾಗಿವೆ. ಬೆಳ್ತಂಗಡಿ ರೋಟರಿ ಕ್ಲಬ್‌ನ ಎಲ್ಲ ಸಮಾಜಮುಖಿ ಕಾರ್ಯಕ್ರಮಗಳಿಗೆ ಕಲಶಪ್ರಾಯವೆಂಬಂತೆ, ಸಂಸ್ಥೆಯ ಗೌರವ ಸದಸ್ಯ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಜ.1ರಿಂದ ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ ಘೋಷಿಸಿದ್ದಾರೆ. ಈ ಮಹತ್ತರ ಸೇವೆಗೆ ಬೆಳ್ತಂಗಡಿ ರೋಟರಿ ಕ್ಲಬ್ ಸರ್ವಸದಸ್ಯರು ಅಭಿವಂದನೆ ಅರ್ಪಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net