

ಕಾರ್ಕಳ: ಬೆಂಗಳೂರಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಪಾಠ ಕಲಿಯುತ್ತಿದ್ದ ಮಕ್ಕಳು, ತುಳುನಾಡಿನ ಗದ್ದೆಗೆ ಇಳಿದು ನಾಟಿ ಮಾಡಿ ಕೃಷಿ ಚಟುವಟಿಕೆಯ ಮಾಹಿತಿ ಪಡೆದುಕೊಂಡರು. ಬೆಂಗಳೂರಿನ ಉತ್ತರದ ಎಂಟು ಕಾಲೇಜುಗಳ ರೋವರ್ಸ್, ರೇಂಜರ್ಸ್ನ 82 ವಿದ್ಯಾರ್ಥಿಗಳು ನಕ್ರೆ ಪರಪುವಿನ ಜ್ಯೋತಿ ಜೆ.ಪೈ ಅವರ ಮನೆಯ ಗದ್ದೆಗೆ ಇಳಿದು ಹಾಡುತ್ತ ನಾಟಿ ಮಾಡಿ ಗಮನ ಸೆಳೆದಿದ್ದಾರೆ.
ಬೇಸಾಯ ಎಂದರೇನು? ಹೇಗೆ ಮಾಡಬೇಕು? ಗದ್ದೆ ಅಂದರೇನು? ಎಂಬ ಬಗ್ಗೆ ತರಗತಿಯಲ್ಲಿ ಪಾಠ ಮಾಡಿದರೆ ಪ್ರಯೋಜನವಿಲ್ಲ. ಮಕ್ಕಳಿಗೆ ಪ್ಯಾರೋಗಿಕ ಜ್ಞಾನ ಇರಬೇಕು ಎಂಬ ಕಾರಣಕ್ಕೆ ಇಲ್ಲಿಗೆ ಕರೆತರಲಾಗಿತ್ತು. ಯುವ ಸಮುದಾಯ ಕೃಷಿಯಿಂದ ವಿಮುಖರಾಗುತ್ತಿರುವುದು ಬೇಸರದ ಸಂಗತಿ. ಕೃಷಿ ಉಳಿಯಬೇಕಾದರೆ ಯುವಕರು ಆಸಕ್ತಿ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಕೃಷಿಯ ಅಭಿರುಚಿ ಮೂಡಲಿ ಎಂಬ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ.ಪೈ ಹೇಳಿದರು.
ಬೆಂಗಳೂರಿನ ಎಂ.ಇ.ಎಸ್ ಕಾಲೇಜಿನಿಂದ ಬಂದ ಕಟೀಲು ಮೂಲದ ವಿದ್ಯಾರ್ಥಿನಿ ಪಂಚಮಿ, ಗದ್ದೆಯಲ್ಲಿ ಉಳುಮೆ ಮಾಡಿದರು. ಗದ್ದೆಗೆ ಇಳಿದು ನಾಟಿ ಮಾಡಿದ್ದು ಖುಷಿ ನೀಡಿತು. ಇಲ್ಲಿನ ಕೃಷಿ ಭೂಮಿಯನ್ನು ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ ಎಂದು ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಬಿಂದು ಹೇಳಿದರು.
ಬೆಂಗಳೂರಿನ ಆರ್.ಸಿ ಕಾಲೇಜು, ಮಲ್ಲೇಶ್ವರಂ ಎಂ.ಇ.ಎಸ್ ಕಾಲೇಜು, ಬೆಂಗಳೂರು ಆರ್ಟ್ಸ್ ಕಾಲೇಜು, ಜಿಎಫ್ಜಿ ಕಾಲೇಜು ರಾಜಾಜಿನಗರ, ಶೇಷಾದ್ರಿಪುರಂ ಮೈನ್ ಕಾಲೇಜು, ಮಹಾರಾಣಿ ಕಾಲೇಜು, ಎಂ.ಇ.ಎಸ್. ಕಾಲೇಜು, ಕೆ.ಕೆ.ಪಿಯು ಕಾಲೇಜು ಮಲ್ಲೇಶ್ವರ, ಹೀಗೆ ಬೆಂಗಳೂರು ಉತ್ತರದ ಒಟ್ಟು 8 ಕಾಲೇಜಿನ ವಿದ್ಯಾರ್ಥಿಗಳು ಬಂದಿದ್ದರು. ಕಾರ್ಕಳದ ಎಂಪಿಎಂ ಕಾಲೇಜಿನ ವಿದ್ಯಾರ್ಥಿಗಳು ಇವರಿಗೆ ಸಹಕಾರ ನೀಡಿದರು.
ಜಿಲ್ಲಾ ತರಬೇತಿ ಆಯುಕ್ತೆ ಸಾವಿತ್ರಿ ಮನೋಹರ, ಜಿಲ್ಲಾ ಗೈಡ್ ಆಯುಕ್ತರಾದ ಜ್ಯೋತಿ ಜೆ.ಪೈ, ಎಂ ಜಗನ್ನಾಥ ಪೈ ನೇತೃತ್ವದಲ್ಲಿ ರಾಜ್ಯ ಮುಖ್ಯ ಆಯುಕ್ತೆ ಪಿಜಿಆರ್ ಸಿಂಧಿಯಾ ಮಾರ್ಗದರ್ಶನದಲ್ಲಿ ರೋವರ್ಸ್ ರೇಂಜರ್ಸ್ನ ವಿದ್ಯಾರ್ಥಿಗಳ ನಾಟಿ ಕಾರ್ಯ ನಡೆಯಿತು.
ನಾನು ಮಂಡ್ಯ ಮೂಲದವಳು. ನಮ್ಮ ಕಡೆ ಭತ್ತ, ರಾಗಿ ಮಾಡುತ್ತಾರೆ. ಆದರೆ ನಾನು ಈವರೆಗೆ ಗದ್ದೆಗೆ ಇಳಿದಿಲ್ಲ. ಆದರೆ ಇಲ್ಲಿ ಗದ್ದೆಗೆ ಇಳಿದು ನಾಟಿ ಮಾಡಿ ಹೊಸ ಅನುಭವ ಪಡೆದುಕೊಂಡೆ.-ಅಂಜುಶ್ರೀ, ಮಲ್ಲೇಶ್ವರಂ ಕಾಲೇಜು ವಿದ್ಯಾರ್ಥಿ