

ಉಳ್ಳಾಲ: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಘರ್ಷಣೆಗಳಿಂದಾಗಿ ಹಬ್ಬಗಳು ಆಯಾಯ ಸಮುದಾಯಕ್ಕೆ ಮಾತ್ರ ಸೀಮಿತಗೊಳ್ಳುವಂತಾಗಿದೆ ಎಂದು ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟಿ ಯು.ಎಚ್.ಫಾರೂಕ್ ಖೇದ ವ್ಯಕ್ತಪಡಿಸಿದರು.
ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರ ತೊಕ್ಕೊಟ್ಟಿನ ಉಳ್ಳಾಲ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸ್ನೇಹಕೂಟ ಮತ್ತು ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಳ್ಳಾಲದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿ, ಉಳ್ಳಾಲ ಪ್ರದೇಶದಲ್ಲಿ ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮ ಉಲ್ಲಂಘನೆ, ಮಾದಕ ವಸ್ತುಗಳ ಬಗ್ಗೆ ಜನಜಾಗೃತಿ, ಕೋಮು ಸಂಘರ್ಷಕ್ಕೆ ಸಾಮಾಜಿಕ ಜಾಲತಾಣಗಳ ಪಾತ್ರ, ಇತ್ತೀಚಿನ ದಿನಗಳಲ್ಲಿ ಉಳ್ಳಾಲದಲ್ಲಿ ನಡೆಯದ ಶಾಂತಿ ಸಭೆಯ ಬಗ್ಗೆ ಸಂವಾದ ನಡೆದು ಈ ಬಗ್ಗೆ ಜನಜಾಗೃತಿ ಮೂಡಿಸುವುದಾಗಿ ಟ್ರಸ್ಟ್ ಪದಾಧಿಕಾರಿಗಳು ಭರವಸೆ ನೀಡಿದರು.
ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್‌ನ ಅಧ್ಯಕ್ಷ ನವಾಝ್ ಉಳ್ಳಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆ, ಉಪಾಧ್ಯಕ್ಷ ಮುಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿ ಮುಹಮ್ಮದ್ ಸಲ್ಮಾನ್, ಸದಸ್ಯರಾದ ಇಬ್ರಾಹಿಂ ಆಲಿಯಬ್ಬ, ಅಬ್ದುಲ್ ರಹಿಮಾನ್, ಮುಸ್ತಫಾ ಉಳ್ಳಾಲ್, ಬಿ.ಎ.ಅಬ್ದುಲ್ ಜಬ್ಬಾರ್, ಯು.ಜಿ.ಸಿದ್ದೀಕ್, ಇಬ್ರಾಹಿಂ ಮಾರ್ಗತಲೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಯು.ಕೆ.ಮುಹಮ್ಮದ್ ಮುಸ್ತಫ ಪ್ರಾಸ್ತಾವಿಕವಾಗಿ ಮಾತನಾಡಿದರು. ಇರ್ಶಾದ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು.