

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಬದಿಯ ಬೆದ್ರೋಡಿಯಲ್ಲಿ ಸರ್ಕಾರಿ ಜಾಗವನ್ನು ಅವ್ಯಾಹತವಾಗಿ ಒತ್ತುವರಿ ಮಾಡಲಾಗುತ್ತಿದ್ದು, ಈ ಒತ್ತುವರಿ ತೆರವುಗೊಳಿಸಿ ಗ್ರಾಮ ಪಂಚಾಯಿತಿ ಬಳಕೆಗೆ ಒಳಪಡಿಸಬೇಕೆಂದು ಬಜತ್ತೂರು ಗ್ರಾಮ ಪಂಚಾಯಿತಿಯ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಗಂಗಾಧರ ಪಿ.ಎನ್ ವಹಿಸಿದ್ದರು. ಪುತ್ತೂರು ತಾ.ಪಂ.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ವಳಾಲಿನಲ್ಲಿ ಕ್ರಾಸಿಂಗ್, ಹೈವೇ ಕಾಮಗಾರಿಯಿಂದಾಗಿ ಹದಗೆಟ್ಟಿರುವ ಮನೆಗಳಿಗೆ ಸಂಪರ್ಕಿಸುವ ರಸ್ತೆಗಳ ದುರಸ್ತಿ, ಪ್ರಕೃತಿ ವಿಕೋಪದಿಂದ ಆದ ಹಾನಿಗೆ ದರ ನಿಗದಿ ಮಾಡಿ ಪರಿಹಾರ, ಬೀದಿ ದೀಪ, ಎಚ್‌ಟಿ ವಿದ್ಯುತ್ ಲೈನ್‌ಗೆ ಸುರಕ್ಷತಾ ಕ್ರಮವಾಗಿ ಪೈಪ್ ಅಳವಡಿಕೆ, ಬಜತ್ತೂರು ಗ್ರಾಮವನ್ನು ಉಪ್ಪಿನಂಗಡಿ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳಪಡಿಸಬೇಕು ಮತ್ತಿತರ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾದವು.
ಇಲಾಖಾಧಿಕಾರಿಗಳಾದ ಮೆಸ್ಕಾಂ ಜೆಇ ನಿತಿನ್‌ಕುಮಾರ್, ಆರೋಗ್ಯ ಸಹಾಯಕಿ ಅನ್ನಮ್ಮ ಕೆ.ಸಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸುಜಾತ, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ, ಕೃಷಿ ಅಧಿಕಾರಿ ಭರಮಣ್ಣನವರ, ಸಿಆರ್‌ಪಿ ಮಂಜುನಾಥ ಕೆ.ವಿ., ಉಪವಲಯ ಅರಣ್ಯಾಧಿಕಾರಿ ಕಾಂತರಾಜು, ಗ್ರಾಮ ಆಡಳಿತಾಧಿಕಾರಿ ನರಿಯಪ್ಪ ಮಠದ ಇಲಾಖಾವಾರು ಮಾಹಿತಿ ನೀಡಿದರು.
ಗ್ರಾಪಂ ಸದಸ್ಯರಾದ ಮೋನಪ್ಪ ಗೌಡ ಬೆದ್ರೋಡಿ, ಸಂತೋಷ್ ಪಂರ್ದಾಜೆ, ಉಮೇಶ್ ಒಡ್ರಪಾಲು, ಗಂಗಾಧರ ಕೆ.ಎಸ್., ಮಾಧವ ಒರುಂಬೋಡಿ, ಸ್ಮಿತಾ ಪುಯಿಲ, ಅರ್ಪಿತಾ ರೈ, ರತ್ನ, ಪ್ರೆಸಿಲ್ಲಾ ಡಿ.ಸೋಜ, ಯಶೋದ, ಪ್ರೇಮ, ಭಾಗೀರಥಿ ಉಪಸ್ಥಿತರಿದ್ದರು. ಪಿಡಿಒ ಚಂದ್ರಮತಿ ಸ್ವಾಗತಿಸಿ ವರದಿ ಮಂಡಿಸಿದರು.