

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಈ ಹಿಂದೆ ಅಕ್ರಮ ಸಕ್ರಮ ಮಾಡಿಕೊಡುವುದಾಗಿ ಹೇಳಿ ಬಡವರಿಂದ ಹಣ ಪಡೆದುಕೊಂಡಿದ್ದರೂ ಕಡತದಲ್ಲಿ ಕುಮ್ಕಿ ಎಂದು ಬರೆದು ಏನೂ ಅರಿಯದ ಮುಗ್ಧರಿಗೆ ಅನ್ಯಾಯ ಮಾಡಿದ್ದಾರೆ. ಕಳೆದ ಕೆಲವು ತಿಂಗಳಿಂದ ನಾವು ಕಡತಗಳನ್ನು ಪರಿಶೀಲನೆ ಮಾಡುವ ವೇಳೆ ಬಡವರಿಗೆ ಸೇರಿದ ಹೆಚ್ಚಿನ ಕಡತಗಳಲ್ಲಿ ಕುಮ್ಕಿ ಎಂದು ಬರೆದಿರುವುದು ಕಂಡು ಬಂದಿದೆ. ಅದನ್ನು ನಾವು ಏನೂ ಮಾಡುವ ಹಾಗಿಲ್ಲ. ಮುಂದೆ ಕುಮ್ಕಿ ಕಾನೂನು ಬಂದಾಗ ಮಾತ್ರ ಅದನ್ನು ನಮಗೆ ವಿಲೇವಾರಿ ಮಾಡಲು ಸಾಧ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಮುಂಡೂರಿನ ಸಹಕಾರಿ ಸಂದ ಸಭಾಭವನದಲ್ಲಿ ಮಂಗಳವಾರ ನಡೆದ 13ನೇ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು.
ತಹಸೀಲ್ದಾರ್ ಪುರಂದರ ಹೆಗ್ಡೆ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿದರು.
60 ಕಡತ ವಿಲೇವಾರಿ
ಬೈಠಕ್‌ನಲ್ಲಿ ಒಟ್ಟು 60 ಕಡತವನ್ನು ವಿಲೇವಾರಿ ಮಾಡಲಾಯಿತು. ಅಕ್ರಮ ಸಕ್ರಮ ಮತ್ತು 94 ಸಿ ಹಕ್ಕುಪತ್ರ ವಿತರಣೆ ಮಾಡಲಾಯಿತು. ಒಳಮೊಗ್ರು, ಸರ್ವೆ, ಮುಂಡೂರು, ಶಾಂತಿಗೋಡು, ಕೆದಂಬಾಡಿ ಗ್ರಾಮದ ಫಲಾನುಭವಿಗಳು ಪಾಲ್ಗೊಂಡಿದ್ದರು.
ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ಮತ್ತು ರೂಪರೇಖಾ ಆಳ್ವ ಉಪಸ್ಥಿತರಿದ್ದರು. ಗ್ರಾಮಕರಣಿಕ ಉಮೇಶ್ ಕಾವಡಿ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಗೋಪಾಲ ವಂದಿಸಿದರು.
ಗ್ರಾಮ ಆಡಳಿತಾಧಿಕಾರಿ ವಿರುದ್ಧ ಶಾಸಕ ಗರಂ...
ಕೆಲವೊಂದು ಗ್ರಾಮಗಳಲ್ಲಿ 94 ಸಿಗೆ ಅರ್ಜಿ ಹಾಕಿದ್ದರೂ ವಿನಾ ಕಾರಣ ಕೆಲ ಗ್ರಾಮಕರಣಿಕರು ಅರ್ಜಿ ವಿಲೇವಾರಿ ಮಾಡಿಲ್ಲ ಎಂಬ ವಿಚಾರವನ್ನು ತಿಳಿಸಿ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಅಶೋಕ್ ಕುಮಾರ್ ರೈ, ಹಲವು ವರ್ಷಗಳಿಂದ ಮನೆ ಕಟ್ಟಿ ವಾಸ್ತವ್ಯ ಇರುವ ಜಾಗಕ್ಕೆ ಹಕ್ಕು ಪತ್ರ ನೀಡಲು ಸಮಸ್ಯೆ ಏನು? ಎಂದು ಸಭೆಯಲ್ಲಿದ್ದ ಗ್ರಾಮ ಆಡಳಿತಾಧಿಕಾರಿಗಳನ್ನು ಪ್ರಶ್ನಿಸಿದರು. ಮುಂದಿನ ಬೈಠಕ್‌ನಲ್ಲಿ ಎಲ್ಲ 94ಸಿ ಅರ್ಜಿಗಳು ವಿಲೇವಾರಿಯಾಗಬೇಕು ಎಂದು ತಾಕೀತು ಮಾಡಿದರು.
ಈ ಹಿಂದೆ ಅಕ್ರಮ ಸಕ್ರಮ ಬೈಠಕ್ ಗ್ರಾಮಗಳಲ್ಲಿ ನಡೆಯುತ್ತಿರಲಿಲ್ಲ, ತಾಲೂಕು ಕಚೇರಿಯಲ್ಲಿ ಬಾಗಿಲು ಹಾಕಿ ಕಡತ ವಿಲೇವಾರಿ ಮಾಡುತ್ತಿದ್ದರು. ವರ್ಷಕ್ಕೆ ಎರಡು ಬಾರಿ ಅಕ್ರಮ ಸಕ್ರಮ ಬೈಠಕ್ ಆಗುತ್ತಿತ್ತು. ಆದರೆ ಈಗ ಅದೇ ಬೈಠಕನ್ನು ಜನರ ಮನೆ ಬಾಗಿಲಲ್ಲಿ ಮಾಡುತ್ತಿದ್ದೇನೆ. ಯಾರಿದಂಲೂ ನಯಾ ಪೈಸೆ ಲಂಚ ಪಡೆದಿಲ್ಲ, ಯಾವುದೇ ರಾಜಕೀಯ ಮಾಡದೆ ಎಲ್ಲ ಪಕ್ಷದವರ ಕಡತವನ್ನು ವಿಲೇವಾರಿ ಮಾಡಿದ್ದೇನೆ. ಹಿಂದೆಂದೂ ಆಗದ ರೀತಿಯಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡುತ್ತಿದ್ದೇನೆ. ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ಅಶೋಕ್ ಕುಮಾರ್ ರೈ, ಶಾಸಕ