ಬಸವರಾಜನ್ ದಂಪತಿಗೆ ಷರತ್ತುಬದ್ಧ ಜಾಮೀನು: ಮಠದ ಆಡಳಿತಾಧಿಕಾರಿ ಹುದ್ದೆಯಿಂದ ಎಸ್​ಕೆಬಿ ಔಟ್

Murugha Sri
ದಾವಣಗೆರೆ ಮೋತಿ ಚನ್ನಬಸಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಮುರುಘಾ ಮಠದ ಅಭಿಮಾನಿಗಳ ಸಭೆ.
Published on

ಚಿತ್ರದುರ್ಗ: ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಮುರುಘಾ ಮಠದ ಡಾ.ಶಿವಮೂರ್ತಿ ಶರಣರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿತು. ಆದರೆ, ಗುರುವಾರ ತಡರಾತ್ರಿ ಶರಣರು ಪೊಲೀಸರಿಗೆ ಶರಣಾಗಿರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಮಹತ್ವ ಕಳೆದುಕೊಂಡಿದ್ದು, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬೇಕಾಗಿದೆ.

ಇನ್ನೊಂದು ಬೆಳವಣಿಗೆಯಲ್ಲಿ ವಾರ್ಡನ್ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ಬಸವರಾಜನ್​ಗೆ ನ್ಯಾಯಾಲಯ ಜಾಮೀನು ನೀಡಿದೆ. ಶರಣರು ಜಾಮೀನು ಕೋರಿ ಆ.29ರಂದು ಸಲ್ಲಿಸಿದ ಅರ್ಜಿಯನ್ನು ಗುರುವಾರ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಧೀಶೆ ಕೋಮಲಾ, ಸರ್ಕಾರಿ ವಕೀಲರಿಗೆ ತಕರಾರು ಅರ್ಜಿ ಸಲ್ಲಿಸಲು ಅವಕಾಶ ನೀಡಿ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದ್ದರು. ಈ ವೇಳೆ ಸಂತ್ರಸ್ತ ಬಾಲಕಿಯರನ್ನು ನ್ಯಾಯಾಲಯಕ್ಕೆ ಕರೆ ತರಲಾಗಿತ್ತು.

ಬಸವರಾಜನ್ ದಂಪತಿಗೆ ಷರತ್ತು ರಹಿತ ಜಾಮೀನು ಮಂಜೂರಾಗಿರುವ ಬಗ್ಗೆ ಅವರ ಪರ ವಕೀಲ ರಾಮದಾಸ್ ಮಾಹಿತಿ ನೀಡಿದರು. ಈ ವೇಳೆ ನಮ್ಮ ಮೇಲಿನ ಆರೋಪ ಸುಳ್ಳೆಂದ ಬಸವರಾಜನ್, ಮಠದ ಆಡಳಿತಾಧಿಕಾರಿ ಬದಲಾವಣೆ ಕುರಿತಂತೆ ಪ್ರತಿಕ್ರಿಯೆಗೆ ನಿರಾಕರಿಸಿದರು.

ಶರಣರಿಗೆ ನೋಟಿಸ್: ದೇಶ ಬಿಟ್ಟು ಹೋಗದಂತೆ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಲುಕ್​ಔಟ್ ನೋಟಿಸ್ ಜಾರಿಯಾಗಿತ್ತು. ರಾಷ್ಟ್ರೀಯ ಮಕ್ಕಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ ಎಂಬ ಮಾಹಿತಿ ಇದೆ.

ಪ್ರತ್ಯೇಕ ಪ್ರತಿಭಟನೆ: ಶರಣರ ಬಂಧನಕ್ಕೆ ಒತ್ತಾಯಿಸಿ ನಗರದಲ್ಲಿ ಗುರುವಾರ ಪ್ರತ್ಯೇಕ ಪ್ರತಿಭಟನೆಗಳು ನಡೆದವು.

ಸ್ವಾಧಾರ ಕೇಂದ್ರಕ್ಕೆ ವಾರ್ಡನ್: ಬಸವರಾಜನ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಡನ್ ಅವರನ್ನು ಡಿವೈಎಸ್​ಪಿ ನೇತೃತ್ವದ ತಂಡ ಗುರುವಾರ ವಿಚಾರಣೆಗೊಳಪಡಿಸಿತ್ತು. ಶುಕ್ರವಾರವೂ ವಿಚಾರಣೆ ಮುಂದುವರಿಯುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಅವರನ್ನು ಚಿತ್ರದುರ್ಗದ ಸ್ವಾಧಾರ ಕೇಂದ್ರದಲ್ಲಿರಿಸಲಾಗಿದೆ.

ಹೈಕೋರ್ಟ್ ಉಸ್ತುವಾರೀಲಿ ತನಿಖೆಯಾಗಲಿ: ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್ ಕೂಡಲೇ ಮಧ್ಯಪ್ರವೇಶಿಸಿ ತನಿಖೆಯ ಮೇಲ್ವಿಚಾರಣೆ ನಡೆಸಬೇಕೆಂದು ಕೋರಿ ಬೆಂಗಳೂರಿನ ವಕೀಲರಾದ ಸಿದ್ಧಾರ್ಥ್ ಭೂಪತಿ, ಟಿ.ಶ್ರೀರಾಮ್ ನಾಯ್್ಕ ಬಿ.ಎಸ್. ಗಣೇಶ್ ಪ್ರಸಾದ್, ವಿ. ಗಣೇಶ್, ಮತ್ತು ಕೆ.ಎ. ಪೊನ್ನಣ್ಣ ರಿಜಿಸ್ಟ್ರಾರ್ ಜನರಲ್​ಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಗುರುವಾರ ಪತ್ರ ಬರೆಯಲಾಗಿದ್ದು, ಮುಕ್ತ ಮತ್ತು ಪಾರದರ್ಶಕ ತನಿಖೆಯ ದೃಷ್ಟಿಯಿಂದ ಕೂಡಲೇ ಹೈಕೋರ್ಟ್ ಮಧ್ಯಪ್ರವೇಶಿಸಿ ತನಿಖೆಯ ಮೇಲೆ ನಿಗಾ ಇಡಬೇಕು ಎಂದು ಕೋರಲಾಗಿದೆ. ಮತ್ತೊಂದೆಡೆ, ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್​ಗೆ ಎಚ್.ಎಂ. ವೆಂಕಟೇಶ್ ಎಂಬುವರು ಪತ್ರ ಬರೆದಿದ್ದಾರೆ.

ನಿ. ನ್ಯಾಯಾಧೀಶರ ನೇಮಕ ಸಾಧ್ಯತೆ: ಮುರುಘಾ ಮಠದ ಆಡಳಿತಾಧಿಕಾರಿ ಹಾಗೂ ಎಸ್​ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಸ್ಥಾನದಿಂದ ಎಸ್.ಕೆ.ಬಸವರಾಜನ್ ಅವರನ್ನು ವಜಾಗೊಳಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ. ಅಧಿಕಾರ, ಆಸ್ತಿ ದುರುಪಯೋಗ ಹಿನ್ನೆಲೆಯಲ್ಲಿ 2007ರ ನವೆಂಬರ್​ನಲ್ಲಿ ವಜಾ ಆಗಿದ್ದ ಅವರನ್ನು 2022ರ ಮಾ.7ರಂದು ಮರು ನೇಮಕ ಮಾಡಿಕೊಳ್ಳಲಾಗಿತ್ತು. ಮಠದ ಪರ ಖರೀದಿಸಿದ ಬಸವರಾಜನ್ ಹೆಸರಲ್ಲಿರುವ ಆಸ್ತಿಗಳನ್ನು ಹಿಂದಿರುಗಿಸುವ ಮೌಖಿಕ ಒಪ್ಪಂದ, ಕೆಲ ಷರತ್ತುಗಳನ್ನು ಈ ವೇಳೆ ವಿಧಿಸಲಾಗಿತ್ತು. ಆದರೆ, ಶರಣರು ಅಮೆರಿಕ, ಮಾರಿಷಸ್ ಪ್ರವಾಸದ ವೇಳೆ ಬಸವರಾಜನ್ ಮಠ, ಪೀಠಾಧಿಕಾರಿ, ವಿದ್ಯಾಪೀಠದ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿ ಒಳಸಂಚು ನಡೆಸಿದ್ದು, ಷರತ್ತು ಪಾಲಿಸಿಲ್ಲ ಎಂದು ಆರೋಪಿಸಲಾಗಿದೆ. ಎಸ್​ಜೆಎಂ ವಿವಿಯಲ್ಲಿ ಸ್ಥಾನ-ಮಾನ ಸಿಗದ ಕಾರಣ ಶರಣರ ಜತೆ ಮಾತಿನ ಚಕಮಕಿ ನಡೆಸಿದ್ದರು. ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿ ತಿಂಗಳಿಂದ ಕರ್ತವ್ಯಕ್ಕೆ ಗೈರಾಗಿದ್ದರು. ಆಗಸ್ಟ್ 26ರಿಂದ ಪೂರ್ವಾನ್ವಯ ಆಗುವಂತೆ ಎರಡೂ ಹುದ್ದೆಗಳಿಂದ ಬಿಡುಗಡೆ ಮಾಡಲಾಗಿದೆ. ವಿದ್ಯಾಪೀಠದ ನೂತನ ಕಾರ್ಯದರ್ಶಿಯನ್ನಾಗಿ ನಿವೃತ್ತ ನ್ಯಾಯಾಧೀಶರೊಬ್ಬರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net