

ಬೆಂಗಳೂರು: ಬಗರ್ ಹುಕುಂ ಸಾಗುವಳಿದಾರರ ದೀರ್ಘಾವಧಿ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿ ನೆರವಿನ ಹಸ್ತಚಾಚಿದ್ದು, ಬಗರ್ ಹುಕುಂನಲ್ಲಿ ತಿರಸ್ಕೃತಗೊಂಡ ಅರ್ಜಿದಾರರಿಗೆ ಮತ್ತೊಂದು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.
ಭೂ ಸುಧಾರಣಾ ಕಾಯ್ದೆ ಅಡಿ ಅಕ್ರಮ ಭೂಮಿಯನ್ನು ಸಕ್ರಮಗೊಳಿಸಿಕೊಳ್ಳಲು ಈ ಹಿಂದೆ ರೈತರು ಹಾಕಿದ್ದ ಅರ್ಜಿಗಳು ತಿರಸ್ಕೃತಗೊಂಡಿದ್ದವು. ಇದೀಗ ಅಂತಹ ರೈತರಿಗೆ ಮತ್ತೊಂದು ಅವಕಾಶ ನೀಡಲಿದ್ದು, ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲ ಆಗಲಿದೆ ಎಂದರು. ಫಾರಂ 50, 53 ರದ್ದಾಗಿದ್ದು, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಈಗ ಭೂಮಿ ನೀಡಲಾಗುವುದಿಲ್ಲ. ಆದರೆ, ಅವಧಿ ವಿಸ್ತರಣೆಗೆ ಸಲ್ಲಿಸಿದ ಮನವಿಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕಟ್ಟಡ ಕಾಮಗಾರಿಗಳಿಗೆ ಸಂಬಂಧಿಸಿದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಎಲ್ಲ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ. ಬಿಹಾರ ಕಾರ್ವಿುಕರು ತಮ್ಮ ಪ್ರದೇಶಗಳಿಂದ ಬೆಂಗಳೂರಿಗೆ ವಾಪಸ್ ಬರಲು ಒಪ್ಪಿದ್ದಾರೆ. ತಮ್ಮ ರಾಜ್ಯಗಳಿಗೆ ಹೋಗುವುದು ಬೇಡ ಇಲ್ಲಿಯೇ ಕೆಲಸ ಸಿಗಲಿದೆ ಎಂಬ ಭರವಸೆ ನೀಡಿದ್ದೇವೆ. ಬೆಂಗಳೂರು ವ್ಯಾಪ್ತಿಯಲ್ಲಿ ಎಲ್ಲ ಕಾಮಗಾರಿಗಳ ಆರಂಭಕ್ಕೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂದು ಸಚಿವರು ತಿಳಿಸಿದರು
10 ಕೋಟಿ ರೂ. ಆದಾಯ ಸಂಗ್ರಹ: ಆಸ್ತಿಗಳ ನೋಂದಣಿ ಮತ್ತು ಮುಂದ್ರಾಂಕ ಶುಲ್ಕ ರೂಪದಲ್ಲಿ ರಾಜ್ಯದ ಬೊಕ್ಕಸಕ್ಕೆ ಸೋಮವಾರದವರೆಗೆ 10 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಈ ಇಲಾಖೆ ಕಾರ್ಯಾರಂಭಿಸಿದ ಮೊದಲ ದಿನ 6 ಲಕ್ಷ ರೂ. ಆದಾಯ ಬಂದಿತ್ತು ಎಂದು ಕಂದಾಯ ಮಂತ್ರಿ ತಿಳಿಸಿದರು.