ಚುನಾವಣಾ ಕಣಕ್ಕೆ ಪದವೀಧರ ದಂಪತಿ: ಜೋಡಿಯಾಗಿ ಪ್ರಚಾರಕ್ಕಿಳಿದಿರುವ ದಂಪತಿಯ ಕನಸಿದು!

Couple
Published on

ಬಾಗಲಕೋಟೆ: ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರ ರಂಗೇರುತ್ತಿದೆ. ಹಳ್ಳಿ ಗದ್ದುಗೆಗಾಗಿ ಗುದ್ದಾಟವೂ ಜೋರಾಗ್ತಾ ಇದೆ. ಪಂಚಾಯಿತಿ ಕಟ್ಟೆಗೆ ವಿದ್ಯಾವಂತರು ಬರಬೇಕೆಂದು ಅನೇಕರು ಹೇಳ್ತಾನೆ ಇರುತ್ತಾರೆ. ಇದೀಗ ಇಲ್ಲೊಂದು ಪಂಚಾಯಿತಿಯಲ್ಲಿ ಸ್ನಾತಕೋತ್ತರ ಪದವಿಧರ ದಂಪತಿ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಾಗೆಂದು ಈ ದಂಪತಿ ಪರಸ್ಪರ ಎದುರಾಳಿಯಾಗಿ ನಿಂತಿಲ್ಲ. ಪತಿ, ಪತ್ನಿ ಬೇರೆ ಬೇರೆ ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡಿದ್ದಾರೆ.

ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ನಾತಕೋತ್ತರ ಪದವಿಧರರಾದ ಮಹದೇವ ಗಾಯಕವಾಡ ಹಾಗೂ ಸಾಗರಿಕ ಗಾಯಕವಾಡ ದಂಪತಿ ಅಖಾಡಕ್ಕೆ ಇಳಿದಿದ್ದಾರೆ.

ಆಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಆಸಂಗಿ, ಅಸ್ಕಿ, ಮದನಮಟ್ಟಿ ಗ್ರಾಮಗಳು ಇವೆ. ಒಟ್ಟು 22 ಸ್ಥಾನಗಳ ಪೈಕಿ ಈಗಾಗಲೇ ನಾಲ್ವರು ಅವಿರೋಧ ಆಯ್ಕೆ ಆಗಿದ್ದಾರೆ. ಈಗ 3ನೇ ವಾರ್ಡಿನಿಂದ ಸಾಗರಿಕಾ ಗಾಯಕವಾಡ ಸ್ಪರ್ಧಿಸಿದ್ದರೆ, ಅವರ ಪತಿ ಮಹದೇವ ಗಾಯಕವಾಡ 4ನೇ ವಾರ್ಡ್​ನಿಂದ ಸ್ಪರ್ಧೆ ಮಾಡಿದ್ದಾರೆ. ಮಹಾದೇವ ಎಂ.ಕಾಂ., ಎಂ.ಎ ಮಾಡಿದ್ದರೆ, ಸಾಗರಿಕಾ ಎಂ.ಎ ಪದವಿಧರೆ.

ತಮ್ಮ ಗ್ರಾಮಕ್ಕೆ ಏನಾದರೂ ಒಂದು ಹೊಸ ಕೊಡುಗೆ ಕೊಡಬೇಕು, ಕಲಿತಂತಹ ನಿರುದ್ಯೋಗಿ ಯುವಕರಿಗೆ ಹೆಚ್ಚು ಹೆಚ್ಚು ಗುಡಿ ಕೈಗಾರಿಕೆಗಳನ್ನು ನಿರ್ಮಿಸಲು ಪ್ರೋತ್ಸಾಹಿಸಿ ಗ್ರಾಮದಲ್ಲಿ ಉದ್ಯೋಗ ಸೃಷ್ಠಿ ಮಾಡುವುದರ ಜತೆಗೆ ಸ್ವಚ್ಛಗ್ರಾಮ ಹಾಗೂ ಸುಂದರ ಗ್ರಾಮದ ಕನಸ್ಸನ್ನು ಹೇಳ್ತಿದ್ದಾರೆ.

ಸ್ನಾತಕೋತ್ತರ ಪದವಿಧರ ದಂಪತಿ ಸ್ಪರ್ಧೆಯಂತೂ ಗಮನ ಸೆಳೆದಿದೆ. ದಂಪತಿ ಸ್ಪರ್ಧೆಗೆ ಮತದಾರರು ಯಾವ ರೀತಿ ಉತ್ತರ ಕೊಡುತ್ತಾನೆ ಎಂದು ಕಾಯ್ದು ನೋಡಬೇಕು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net