ಗರ್ಭಪಾತ, ಮಹಿಳೆ ಸಾವು: ಸರ್ಕಾರಿ ಅಧಿಕಾರಿ ಜತೆ ಆರೋಪಿ ಕವಿತಾ ಹಣದ ವ್ಯವಹಾರ? ಬಗೆದಷ್ಟೂ ಹುಳುಕು

Untitled-design-20-1
Published on

ಬಾಗಲಕೋಟೆ: ಗರ್ಭಪಾತ ದಂಧೆಗೆ ಮಹಾರಾಷ್ಟ್ರ ಮೂಲದ ಮಹಿಳೆ ಸಾವಿಗೀಡಾದ ಪ್ರಕರಣಕ್ಕೆ ಇದೀಗ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಸಿಗುತ್ತಿದ್ದು, ಸರ್ಕಾರಿ ಅಧಿಕಾರಿ ಜತೆ ಆರೋಪಿ ಕವಿತಾ ಹಣದ ವ್ಯವಹಾರ ಮಾಡಿದ್ದಾರೆ ಎಂದು ಹೇಳಲಾಗಿದೆ. ಮಹಾಲಿಂಗಪುರ ಪಟ್ಟಣದಲ್ಲಿ‌ ಮೇ.27ರಂದು ಗರ್ಭಪಾತದಿಂದ ಮೃತಪಟ್ಟ ಮಹಾರಾಷ್ಟ್ರ ಮೂಲದ ಸೋನಾಲಿ(32) ಎಂಬ ಮಹಿಳೆಯ ಕೇಸ್​ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಪೊಲೀಸರಿಗೆ ಇದೀಗ ಶಾಕಿಂಗ್ ಸಂಗತಿಗಳು ಕೇಳಿಬರುತ್ತಿವೆ.

ಆರೋಪಿ ಕವಿತಾ ಬಾಡನವರ ಹೆಸರಲ್ಲಿ ಒಟ್ಟು ಐದು ಖಾತೆ ಇದೆ. ಐದು ಖಾತೆ ಪ್ರೀಜ್ ಮಾಡಲು ಇದೀಗ ಮಹಾಲಿಂಗಪುರ ಪೊಲೀಸರು ಲೆಟರ್ ಕೊಟ್ಟಿದ್ದಾರೆ. ಕೆನರಾ ಬ್ಯಾಂಕ್, ಇಂಡಿಯನ್ ಓವರ್ ಸೀಸ್, ಇಂಡಿಯನ್ ಬ್ಯಾಂಕ್, ಮಗನ ಖಾತೆ ಜತೆಗೆ ಜಂಟಿ ಖಾತೆ ಹೊಂದಿದ ಕೆನರಾ ಬ್ಯಾಂಕ್ ಮತ್ತು ಬಸವೇಶ್ವರ ಸಹಕಾರಿ ಬ್ಯಾಂಕ್ ಸೇರಿದಂತೆ ಒಟ್ಟು 5 ಖಾತೆಯನ್ನು ಪ್ರೀಜ್ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ರವಾನಿಸಲಾಗಿದೆ.

ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಜೊತೆ ಹಣದ ವ್ಯವಹಾರ ಆರೋಪವಿದ್ದು, ತಿಂಗಳಲ್ಲಿ ಮೂರರಿಂದ ನಾಲ್ಕು ಬಾರಿ ಕವಿತಾಗೆ ಅಧಿಕಾರಿಯಿಂದ ಹಣ ವರ್ಗಾವಣೆ ಆಗುತ್ತಿತ್ತು ಎನ್ನಲಾಗಿದೆ. 10ರಿಂದ 30 ಸಾವಿರ ರೂ.ವರೆಗೆ ನಗದು ವರ್ಗಾವಣೆಯಾಗಿದೆ. ಇಬ್ಬರ ಸಂಪರ್ಕದ ಹಿಂದಿರುವ ಕಾರಣವೇನು ಎಂಬ ಬಗ್ಗೆಯೂ ತನಿಖೆ ನಡೆಸಲು ಇದೀಗ ಪೊಲೀಸರು ಮುಂದಾಗಿದ್ದಾರೆ.

ಸದ್ಯ ಕವಿತಾಳನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು, ಆಕೆಯ ಸಮೇತ ಮನೆ ಸ್ಥಳ ಮಹಜರು‌ ಮಾಡಿದ್ದಾರೆ. ವಾಟ್ಸಾಪ್ ಕಾಲ್ ಮೂಲಕವೇ ಗರ್ಭಪಾತ ದಂಧೆ ಮಾತುಕತೆ ನಡೆಸುತ್ತಿದ್ದ ಕವಿತಾ, ಮೊನ್ನೆಯ ಪ್ರಕರಣದಲ್ಲಿ 40 ಸಾವಿರ ರೂ. ಪಡೆದಿರುವ ಮಾಹಿತಿಯಿದೆ ಎಂದು ಬಾಗಲಕೋಟೆ ಎಸ್ಪಿ ಅಮರನಾಥರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net