ಹಳೇ ಕಟ್ಟಡ ತೆರವಿಗೆ ಮೀನಮೇಷ : ಬಿ.ಸಿ.ರೋಡ್ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ಶಿಥಿಲ : ವಿದ್ಯಾರ್ಥಿಗಳಿಗೆ ಬಾಡಿಗೆ ನಿವಾಸ

New Project (7)
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಅವಿಭಜಿತ ದ.ಕ. ಜಿಲ್ಲೆಯ ಪರಿಶಿಷ್ಟ ಜಾತಿ ಸಮುದಾಯದ ಮಕ್ಕಳಿಗಿದ್ದ ಏಕೈಕ ವಸತಿಯುತ ಶಾಲೆ ಬಿ.ಸಿ.ರೋಡಿನ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳ ಸುರಕ್ಷತೆಗಾಗಿ ಹಳೇ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸುವ ಉದ್ದೇಶದಿಂದ 2 ವರ್ಷಗಳ ಹಿಂದೆಯೇ ಬೆಂಜನಪದವಿನ ಬಾಡಿಗೆ ಕಟ್ಟಡಕ್ಕೆ ವಸತಿ ಶಾಲೆಯನ್ನು ಸ್ಥಳಾಂತರಗೊಳಿಸಲಾಗಿದೆ. ಕಟ್ಟಡ ನಿರ್ಮಾಣದ ಕೆಲಸ ಆರಂಭವಾಗುತ್ತಿದ್ದರೆ ಇಷ್ಟೊತ್ತಿಗೆ ಹೊಸ ಕಟ್ಟಡ ನಿಮಾಣವಾಗುತ್ತಿತ್ತೇನೋ, ದುರದೃಷ್ಟವಶಾತ್ ಹಳೆಯ ಮುರುಕಲು ಕಟ್ಟಡವೇ ಇನ್ನೂ ತೆರವಾಗಿಲ್ಲ.

ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಕಚೇರಿ ಬಳಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ 4 ದಶಕಗಳಿಂದ ಕಾರ್ಯನಿರ್ವಹಿಸುತ್ತಿತ್ತು. ಆರ್‌ಸಿಸಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿ ಮಳೆಗಾಲದಲ್ಲಿ ಕಟ್ಟಡದ ಸಂದುಗಳಿಂದ ನೀರು ಸೋರಿಕೆಯಾಗುತ್ತಿತ್ತು. ತರಗತಿ ಕೋಣೆ ಹಾಗೂ ಮಕ್ಕಳು ಮಲಗುವ ಕೋಣೆಯ ಮೇಲ್ಛಾವಣಿಯ ಸ್ಲಾೃಬ್‌ಗಳು ಅಲ್ಲಲ್ಲಿ ಉದುರಿ ಕಬ್ಬಿಣದ ರಾಡ್ ಕಾಣಿಸುತ್ತಿತ್ತು. ಗೋಡೆಗಳಲ್ಲಿ ಪಾಚಿ ತುಂಬಿ ಕಟ್ಟಡ ವಿದ್ಯಾರ್ಥಿಗಳ ಕಲಿಕೆ ಹಾಗೂ ವಸತಿಗೆ ಯೋಗ್ಯವಾಗಿಲ್ಲ ಎನ್ನುವುದು ಕಂಡು ಬಂದಿತ್ತು.

ಒಂದನೆಯಿಂದ ಐದನೇ ತರಗತಿವರೆಗಿನ ಪುಟ್ಟಮಕ್ಕಳು ಕಲಿಯುತ್ತಿದ್ದ ಈ ವಸತಿ ಶಾಲೆಯನ್ನು ಪುನಃನಿರ್ಮಿಸಿ ಕೊಡುವಂತೆ ಇಲಾಖೆಯ ಮೂಲಕ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಎರಡು ವರ್ಷಗಳ ಹಿಂದೆ ಸಂಬಂಧಪಟ್ಟ ಇಂಜಿನಿಯರ್‌ಗಳು ಕಟ್ಟಡವನ್ನು ಪರಿಶೀಲಿಸಿ ಯೋಗ್ಯವಲ್ಲ ಎಂದು ವರದಿ ನೀಡಿದ ಹಿನ್ನೆಲೆಯಲ್ಲಿ 2022-23ನೇ ಸಾಲಿನಲ್ಲಿ ವಿದ್ಯಾರ್ಥಿಗಳನ್ನು ಬೆಂಜನಪದವಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಹಳೇ ಕಟ್ಟಡ ತೆರವಿಗೆ ಸರ್ಕಾರದಿಂದ ಆದೇಶ ಬಂದಿರಲಿಲ್ಲ. ಕಳೆದ ಆಗಸ್ಟ್ ತಿಂಗಳಲ್ಲಿ ತೆರವಿನ ಆದೇಶ ಬಂದಿದ್ದು, ಬಂಟ್ವಾಳ ಪುರಸಭೆಯಿಂದ ಅನುದಾನ ಪಡೆದು ಕಟ್ಟಡ ತೆರವು ಮಾಡುವಂತೆ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಗೆ ಆದೇಶಿಸಲಾಗಿತ್ತು.

ಹಳೇ ಕಟ್ಟಡ ತೆರವು ಮಾಡುವ ಕುರಿತು ಆದೇಶ ಬಂದು ಮೂರು ತಿಂಗಳು ಕಳೆದರೂ ಇನ್ನೂ ಕೂಡ ಕಟ್ಟಡ ತೆರವಿಗೆ ತಗಲುವ ವೆಚ್ಚದ ಕ್ರಿಯಾಯೋಜನೆಯೇ ಸಿದ್ಧಗೊಂಡಿಲ್ಲ. ಪುರಸಭೆಯಲ್ಲಿ ಅನುದಾನ ಕೇಳಬೇಕಾದರೆ ಅದಕ್ಕೆ ಎಷ್ಟು ವೆಚ್ಚ ಬೇಕಾಗುತ್ತದೆ ಎಂದು ಕ್ರಿಯಾಯೋಜನೆ ಸಿದ್ಧಗೊಳ್ಳಬೇಕಾಗುತ್ತದೆ. ಇನ್ನೂ ಕೂಡ ಬೇಕಿರುವ ಮೊತ್ತದ ಕ್ರಿಯಾಯೋಜನೆಯೇ ಸಿದ್ಧಗೊಳ್ಳದೆ ಇರುವುದರಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಪುರಸಭೆಗೆ ಮನವಿ ಕೂಡ ಹೋಗಿಲ್ಲ. ಮನವಿ ಹೋಗಿ ಪುರಸಭೆಯ ಸಾಮಾನ್ಯಸಭೆಯಲ್ಲಿ ಅನುಮೋದನೆಗೊಂಡು ಬಳಿಕ ಅನುದಾನ ಬರಲಿದೆ. ಇದಕ್ಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದರೆ ಅನುದಾನವೂ ವಿಳಂಬವಾಗಲಿದೆ.

ಪುರಸಭೆ ಅನುದಾನ ಕಷ್ಟ

ಶಾಲಾ ಕಟ್ಟಡವು ಪುರಸಭಾ ವ್ಯಾಪ್ತಿಯಲ್ಲಿರುವುದರಿಂದ ಕಟ್ಟಡ ತೆರವಿಗೆ ಅನುದಾನ ನೀಡುವ ಹೊಣೆ ಪುರಸಭೆಯದ್ದು. ಪುರಸಭೆಯ ಈ ವರ್ಷದ ಅನುದಾನಗಳನ್ನು ಈಗಾಗಲೇ ಮೀಸಲಿಟ್ಟಿರುವುದರಿಂದ ಈ ಆರ್ಥಿಕ ವರ್ಷದಲ್ಲಿ ಕಟ್ಟಡ ತೆರವಿಗೆ ಅನುದಾನ ಮೀಸಲಿಡುವುದು ಕಷ್ಟ ಸಾಧ್ಯ. ಏಪ್ರಿಲ್ ಬಳಿಕವೇ ಅನುದಾನ ಸಿಗುವ ಸಾಧ್ಯತೆ ಇದೆ. ಅದರ ಬಳಿಕ ಹೊಸ ಕಟ್ಟಡ ನಿರ್ಮಾಣವಾಗ ಬೇಕಿರುವುದರಿಂದ ಆಶ್ರಮ ಶಾಲೆ ಇನ್ನೂ ಕೆಲವು ವರ್ಷಗಳ ಕಾಲ ಬಾಡಿಗೆ ಕಟ್ಟಡದಲ್ಲೇ ಕಾರ್ಯಾಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಬಂಟ್ವಾಳ ಪುರಸಭೆಯ ಅನುದಾನ ಬಳಸಿ ಹಳೇ ಕಟ್ಟಡ ತೆರವು ಮಾಡುವಂತೆ ಆದೇಶ ಬಂದಿದ್ದು, ಹೀಗಾಗಿ ಅನುದಾನ ಕೇಳುವ ಮೊದಲು ಕ್ರಿಯಾಯೋಜನೆ ಸಿದ್ಧಪಡಿಸಿಕೊಡಲು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದೇವೆ. ಅದು ಬಂದ ಬಳಿಕ ಪುರಸಭೆಗೆ ಮನವಿ ಮಾಡಿ ಅನುದಾನ ಪಡೆದು ಲೋಕೋಪಯೋಗಿ ಇಲಾಖೆಯ ಮೂಲಕ ಕಟ್ಟಡ ತೆರವುಗೊಳ್ಳಲಿದೆ. ಸುನೀತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net