

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಭಗವಂತ ಸಮಾಜ, ಜನರ ಉದ್ಧಾರಕ್ಕಾಗಿ ಭಗವದ್ಗೀತೆಯಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾನೆ. ಸೂಕ್ತ ಕಾಲದಲ್ಲಿ ಗೀತೆ ಅಧ್ಯಯನ ಮಾಡುವುದರಿಂದ ಉತ್ತಮ ಸಂಸ್ಕಾರ ಪ್ರಾಪ್ತಿಯಾಗುತ್ತದೆ ಎಂದು ಶೃಂಗೇರಿ ಮಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಕರ್ಕುಂಜೆ ಗ್ರಾಮದ ನೆಂಪುವಿನಲ್ಲಿ ನಿರ್ಮಿಸಲಾಗಿರುವ ಶ್ರೀಕೃಷ್ಣ ದೇವರ ಶಿಲಾಮಯ ಗುಡಿ ಲೋಕಾರ್ಪಣೆ, ದೇವರಿಗೆ ಅಷ್ಟಬಂಧ ಪ್ರತಿಷ್ಠಾಪನೆ, ಬ್ರಹ್ಮಕುಂಭಾಭಿಷೇಕ ನೆರವೇರಿಸಿ ಆಶೀರ್ವಚನ ನೀಡಿ, ಜೀವನದಲ್ಲಿ ಒಳ್ಳೆಯ ಸ್ಥಿತಿಗೆ ತಲುಪಬೇಕಾದರೆ ಗೀತೆಯ ಅಧ್ಯಯನ ಬಹಳ ಅವಶ್ಯಕ. ಮನುಷ್ಯನು ಭಗವಂತ ಕೊಟ್ಟ ಬುದ್ಧಿ, ಶಕ್ತಿ ಬಳಸಿ ಶ್ರಮಿಸಿದರೆ ಉತ್ತಮ ಜೀವನ ಪ್ರಾಪ್ತಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಗೌರವಾರ್ಪಣೆ: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಉದ್ಯಮಿ ಕೃಷ್ಣಮೂರ್ತಿ ಮಂಜರು, ಸಂಚಾರ ಆಯುಕ್ತ ಮಲ್ಲಿಕಾರ್ಜುನ, ಉದ್ಯಮಿಗಳಾದ ವಿಜಯ ಕುಮಾರ್ ರೆಡ್ಡಿ, ಪ್ರಸಾದ್ ಕೊಂಡಯ್ಯ, ಮಂತ್ರಾಲಯದ ಶ್ರೀನಿವಾಸ ರಾವ್, ಎಸ್ಎಸ್ಎಲ್ಸಿಯಲ್ಲಿ ರ್ಯಾಂಕ್ ಪಡೆದ ವಿ.ಕೆ.ಆರ್.ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಶ್ರೀಗಳು ಗೌರವಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಅರ್ಚಕ ವೃಂದ, ವಿವಿಧ ಕ್ಷೇತ್ರಗಳ ಗಣ್ಯರು, ಭಕ್ತರು ಉಪಸ್ಥಿತರಿದ್ದರು.
ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸ್ವಾಗತಿಸಿದರು. ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಉಮೇಶ್ ಶೆಟ್ಟಿ ವಂದಿಸಿದರು. ಜೋತಿಷಿ ಟಿ.ವಾಸುದೇವ ಜೋಯಿಸ್ ಕಾರ್ಯಕ್ರಮ ನಿರೂಪಿಸಿದರು.