ವಿಜಯವಾಣಿ ಸುದ್ದಿಜಾಲ ಉಡುಪಿ: ಕನ್ನಡದ ಕಿರುತೆರೆಯಲ್ಲಿ ವಿಶಿಷ್ಟ ಹಾಸ್ಯ ನಟನೆ ಮೂಲಕ ತನ್ನದೇ ವಿಶೇಷ ಛಾಪು ಮೂಡಿಸಿದ್ದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಉಡುಪಿಯ ಮಲ್ಪೆ ರಾಕೇಶ್ ಪೂಜಾರಿ (33) ಹೃದಯಾಘಾತದಿಂದ ಕುಸಿದುಬಿದ್ದು ಭಾನುವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ.

ಕಾರ್ಕಳದ ನಿಟ್ಟೆ ಸಮೀಪದ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಕುಣಿಯುತ್ತಿದ್ದ ವೇಳೆ ಕುಸಿದುಬಿದ್ದರೆಂದು ತಿಳಿದು ಬಂದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ರಾಕೇಶ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃಪಟ್ಟಿರುವುದಾಗಿ ಹೇಳಿದ್ದಾರೆಂದು ತಿಳಿದು ಬಂದಿದೆ.
2018ರಲ್ಲಿ ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಸೀಸನ್ 2’ಗೆ ಆಯ್ಕೆಯಾಗಿದ್ದ ರಾಕೇಶ, ರನ್ನರ್ ಅಪ್ ತಂಡದಲ್ಲಿದ್ದರು. ನಂತರದ ಸೀಸನ್-3ರಲ್ಲಿ ವಿನ್ನರ್ ಆಗಿದ್ದರು.
ಸಿನಿಮಾದಲ್ಲೂ ಅಭಿನಯ
ಕನ್ನಡದ ಪೈಲ್ವಾನ್, ಇದು ಎಂಥಾ ಲೋಕವಯ್ಯ ಚಿತ್ರಗಳಲ್ಲಿ ನಟಿಸಿದ್ದಾರೆ. ತುಳು ಭಾಷೆಯ ಪೆಟ್ಟಮ್ಮಿ, ಅಮ್ಮೆರ್ ಪೊಲೀಸ್ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.
ಸಿನಿಮಾಗಿಂತ ಹೆಚ್ಚಾಗಿ ಕಾಮಿಡಿ ಕಿಲಾಡಿಗಳು ಸೀಸನ್- 3 ವಿಜೇತರಾದ ಬಳಿಕ ಅವರು ಕರುನಾಡಿನ ಮನಗೆದ್ದಿದ್ದರು.