

ತುಮಕೂರು: ಹಣದ ಸಮೇತ ಎಟಿಎಂ ಯಂತ್ರವನ್ನು ಕಳ್ಳರು ಹೊತ್ತೊಯ್ದಿರುವ ಪ್ರಕರಣ ನಗರದ ಹೊರವಲಯದ ಹೆಗ್ಗೆರೆಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಹೆಗ್ಗೆರೆಯ ಇಂಡಿಯನ್ ಓವರ್‌ಸಿಸ್ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ನಿನ್ನೆ ಮಧ್ಯರಾತ್ರಿ ನುಗ್ಗಿರುವ ಕಳ್ಳರು ಹಣದ ಸಮೇತ ಎಟಿಎಂ ಯಂತ್ರವನ್ನು ಕದ್ದೊಯ್ದಿದ್ದಾರೆ. ಬ್ಯಾಂಕ್ ಬಳಿಯೇ ಎಟಿಎಂ ಕೇಂದ್ರ ಹಾಗೂ ಜಿಮ್ ಕೇಂದ್ರ ಇದೆ. ಬೆಳಗಿನಜಾವ ಜಿಮ್ ಕೇಂದ್ರಕ್ಕೆ ಬಂದವರು ಎಟಿಎಂ ಕೇಂದ್ರದಲ್ಲಿ ಎಟಿಎಂ ಯಂತ್ರ ಕಳುವಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರವಾಣಿ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಗ್ರಾಮಾಂತರ ಠಾಣೆ ಪಿಎಸ್ಸೈ ಲಕ್ಷ್ಮಯ್ಯ ಹಾಗು ಸಿಬ್ಬಂದಿ ಸ್ಥಳಕ್ಕೆ ಬಂದು ಎಟಿಎಂ ಕೇಂದ್ರದಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಧ್ಯರಾತ್ರಿ ವಾಹನದಲ್ಲಿ ಬಂದಿರುವ ಕಳ್ಳರು ಹಣದ ಸಮೇತ ಎಟಿಎಂ ಯಂತ್ರವನ್ನು ಕದ್ದೊಯ್ದಿದ್ದಿರುವುದು ಕಂಡು ಬಂದಿದೆ. ಆದರೆ, ಸಿಸಿ ಟಿವಿ ಫೂಟೇಜ್‌ಗಳು ಅಸ್ಪಷ್ಟವಾಗಿದೆ ಎನ್ನಲಾಗಿದೆ.
83 ಸಾವಿರ ನಗದು !: ಕಳ್ಳರು ಹೊತ್ತೊಯ್ದಿರುವ ಎಟಿಎಂ ಯಂತ್ರದಲ್ಲಿ 83 ಸಾವಿರ ರೂ., ನಗದು ಇತ್ತು ಎಂದು ಬ್ಯಾಂಕ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಎಟಿಎಂ ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ವಿಶೇಷ ತಂಡ ರಚನೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಟಿಎಂ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಎಟಿಎಂ ಕಳವು ಮಾಡಿರುವ ಖದೀಮರ ಪತ್ತೆಗಾಗಿ ಡಿವೈಎಸ್ಪಿ ತಿಪ್ಪೇಸ್ವಾಮಿ, ಸಿಪಿಐ ರಾಮಕೃಷ್ಣ ಹಾಗೂ ಪಿಎಸ್‌ಐ ಲಕ್ಷ್ಮಯ್ಯ ನೇತೃತ್ವದಲ್ಲಿ ವಿಶೇಷ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ರಚಿಸಿದ್ದಾರೆ.